ಮೈಸೂರು : ಸಂಶೋಧಕರಲ್ಲಿ ನಿರಂತರತೆ ಇರಬೇಕು ಅಹಂ ಇರಬಾರದು ಕಠಿಣ ಪರಿಶ್ರಮದಿಂದ ಗುರಿ ಇಟ್ಟುಕೊಂಡು ಸಾಧನೆ ಮಾಡಿದರೆ ವಿದ್ಯೆ ಒಲಿಯುತ್ತದೆ ಎಂದು ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಡಾ. ರಾಜ್‌ಕುಮಾರ್ ಕೆ.ಆರ್. ತಿಳಿಸಿದರು.
ನಗರದ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಧೆಯಲ್ಲಿ ಪರಿಶಿಷ್ಠ ಪಂಗಡದ ಸಂಶೋಧನಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ೧೦ ದಿನಗಳ ಸಂಶೋಧನಾ ಸಾಮರ್ಥ್ಯ ಅಭಿವೃದ್ಧಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಸರ್ಟಿಫಿಕೇಟ್ ವಿತರಿಸಿ ಮಾತನಾಡಿದ ಅವರು ೧೦ ದಿನಗಳ ಕಾರ್ಯಾಗಾರದಲ್ಲಿ ೩೮ ವಿಷಯಗಳ ಬಗ್ಗೆ ೧೮ ಜನ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿದ್ದಾರೆ.
ಸಂಶೋಧನೆ ಸರಿಯಾಗಿ ಮಾಡಿದರೆ ಒಳ್ಳೆಯ ಸಂಶೋಧಕರಾಗಿ ಹೊರಹೊಮ್ಮುತ್ತೀರಿ. ಹೆಚ್ಚು ಹೆಚ್ಚು ವಿಚಾರಗಳನ್ನು ತಿಳಿದುಕೊಂಡಾಗ ನಮ್ಮ ನಡವಳಿಕೆಗಳೇ ಬದಲಾಗುತ್ತವೆ. ಪರಿಶಿಷ್ಠ ಪಂಗಡದ ೫೦ ಸಮುದಾಯಗಳಲ್ಲಿ ಬುಡಕಟ್ಟು ಸಮುದಾಯದ ಸಂಸ್ಕೃತಿ ಭಿನ್ನವಿಭಿನ್ನವಾಗಿವೆ. ವ್ಯವಸ್ಥೆಗಳನ್ನು ಸರಿದೂಗಿಸಲು ಸರ್ಕಾರ ಪ್ರಯತ್ನ ಮಾಡುತ್ತಿದೆ.
ಸಂಶೋಧಕರು ತರಭೇತಿ ಕಾರ್ಯಗಾರಗಳಿಗೆ ಹೋಗಬೇಕು, ಸಂಶೋಧನೆ ಕರಗತವಾಗಬೇಕು ಕಲೆ ಆಗಬಾರದು. ಪರಿಶಿಷ್ಠ ಪಂಗಡದ ವಿದ್ಯಾರ್ಥಿಗಳಿಗೆ ಏಕಲವ್ಯ ಮಾದರಿ ಶಾಲೆಗಳಲ್ಲಿ ೬ ರಿಂದ ೧೨ನೇ ತರಗತಿವರೆಗೆ ಉಚಿತ ಶಿಕ್ಷಣ ನೀಡುತ್ತಿದೆ. ಪರಿಶಿಷ್ಠ ಪಂಗಡದ ೧೦೦ ಜನ ವಿದ್ಯಾರ್ಥಿಗಳು ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸರ್ಕಾರ ಇವರಿಗೆ ೨೦ ರಿಂದ ೭೦ ಲಕ್ಷದವರೆಗೆ ಖರ್ಚುಮಾಡುತ್ತದೆ. ವಿದೇಶದಲ್ಲಿ ಓದಿದವರು ದೇಶಕ್ಕೆ ಬಂದು ಸೇವೆ ಮಾಡಿ ತಂದೆ ತಾಯಿ ನೋಡಿಕೊಳ್ಳಿರಿ. ಸರ್ಕಾರ ಅಧಿಕಾರಿಗಳು ನಿಮಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡುತ್ತಿದ್ದಾರೆ ಸದುಪಯೋಗ ಪಡೆದುಕೊಳ್ಳಿರಿ. ಬುಡಕಟ್ಟು ಸಂಶೋಧನಾ ಸಂಸ್ಥೆಯ ಕಾರ್ಯಾಗಾರದ ಬಗ್ಗೆ ಒಳ್ಳೆಯ ಮಾತುಗಳನ್ನು ತಿಳಿಸಿದ್ದೀರಿ ಎಲ್ಲರಿಗೂ ಧನ್ಯವಾದಗಳು ಎಂದರು.
ಸಮಾರಂಭದಲ್ಲಿ ಪ್ರೊ. ಎಸ್.ವಿ. ರಮಣಯ್ಯ, ತಾಲ್ಲೋಕು ಕಲ್ಯಾಣಾಧಿಕಾರಿ ಅರುಣ್‌ಪ್ರಭು, ಕಛೇರಿ ಅಧೀಕ್ಷಕರಾದ ನಾಗರತ್ನ ಎಂ.ವಿ., ಡಾ. ಬಿ.ಆರ್. ಮಂಜುನಾಥ್, ಡಾ. ಕಲಾವತಿ, ಡಾ. ಮೋಹನ್‌ಕುಮಾರ್, ಡಾ. ರವಿಕುಮಾರ್ ಹಾಜರಿದ್ದರು.