ಬೆಳ್ತಂಗಡಿ : ಧ್ಯಾನದಿಂದ ಸಾಕಷ್ಟು ಪ್ರಯೋಜನ ಸಿಗಲಿದ್ದು, ಮನಸ್ಸಿನಲ್ಲಿ ಗೊಂದಲ ಪರಿಹಾರವಾಗಿ ಶಾಂತಿ, ನೆಮ್ಮದಿ ದೊರೆಯುತ್ತದೆ. ಮನಸ್ಸಿನಲ್ಲಿ ಬರುವ ಋಣಾತ್ಮಕ ಚಿಂತನೆಗಳನ್ನು ದೂರ ಮಾಡಿ ಧನಾತ್ಮಕ ಚಿಂತನೆಯಲ್ಲಿ ಮಗ್ನವಾಗಲು ಧ್ಯಾನ ಉತ್ತಮ ಮಾರ್ಗವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಬೆಂಗಳೂರಿನ ವಿಶ್ವ ಚೈತನ್ಯ ಕ್ವಾಂಟಮ್ ಫೌಂಡೇಶನ್ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಮೂರುದಿನಗಳ ಕಾಲ ಹಮ್ಮಿಕೊಂಡಿದ್ದ ಧ್ಯಾನ ಮಹಾಯಜ್ಞ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಮನಸ್ಸು ಮರ್ಕಟದಂತೆ ಸದಾ ಚಂಚಲವಾಗಿರುತ್ತದೆ. ಚಂಚಲ ಮನಸ್ಸನ್ನು ಧ್ಯಾನದ ಮೂಲಕ ನಿಯಂತ್ರಿಸಲು ಸಾಧ್ಯ. ಕೆಲವು ವರ್ಷಗಳ ಹಿಂದೆ ಜರ್ಮನಿಯ ಮೂವರು ಪ್ರಜೆಗಳು ಶ್ರೀಕ್ಷೇತ್ರದಲ್ಲಿ ೨-೩ ವರ್ಷಗಳ ಕಾಲ ಇದ್ದು, ಧ್ಯಾನ ಸಾಧನೆಯಲ್ಲಿ ತೊಡಗಿದ್ದರು. ಅಲ್ಲದೆ ಇಲ್ಲಿಯ ಅನೇಕರಿಗೆ ಧ್ಯಾನದ ಮಹತ್ವವನ್ನು ತಿಳಿಸಿಕೊಟ್ಟು ಧ್ಯಾನಾಸಕ್ತರಾಗಲು ಪ್ರೇರಣೆ ನೀಡಿದ್ದರು.
ಧ್ಯಾನದಿಂದ ಮನಸ್ಸು ಏಕಾಗ್ರಗೊಳಿಸಿ ಸಾಧನೆ, ಸಿದ್ಧಿಯನ್ನು ಮಾಡಬಹುದು. ಆಂಧ್ರಪ್ರದೇಶ, ತೆಲಂಗಣ, ತಮಿಳುನಾಡು ರಾಜ್ಯಗಳ ಧ್ಯಾನಾಸಕ್ತರೂ ಆಗಮಿಸಿರುವುದು ಸಂತೋಷ ತಂದಿದೆ. ವಿಶ್ವ ಚೈತನ್ಯ ಕ್ವಾಂಟಮ್ ಫೌಂಡೇಶನ್ ಹಮ್ಮಿಕೊಂಡಿರುವ ಧ್ಯಾನ ಕಾರ್ಯಕ್ರಮದಿಂದ ಜನರಿಗೆ, ಭಕ್ತರಿಗೆ ಧ್ಯಾನದ ಪರಿಚಯವಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸಾಯಿಕೀರ್ತಿನಾಥ ಸ್ವಾಮೀಜಿ, ಬಿ.ಶಿವರಾಮಪ್ಪ, ಶ್ರೀನಿವಾಸ್ ಮತ್ತು ದಿವ್ಯ, ಯೋಗಮಿತ್ರ ಡಾ.ಸುಬ್ಬು ಭಯ್ಯ ಧರ್ಮಸ್ಥಳದ ಶಾಂತಿವನ ಟ್ರಸ್ಟ್ ನ ಯೋಗ ನಿರ್ದೇಶಕ ಡಾ.ಶಶಿಕಾಂತ್ ಜೈನ್, ಪ್ರಕಾಶಬಾಬು, ವಿನುತಾ, ಲಲಿತಾನಾರಾಯಣ, ಮಂಜುನಾಥ್ ಹಾಗೂ ಗಣ್ಯರು ಉಪಸ್ಥಿತರಿದ್ದರು.



