ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಜನರ ತೆರಿಗೆ ಹಣದಲ್ಲಿ ರಸ್ತೆ ಅಭಿವೃದ್ಧಿ ಮಾಡುತ್ತಿರುವುದು, ಒಮ್ಮೆ ರಸ್ತೆ ನಿರ್ಮಾಣ ಮಾಡಿದರೆ ಕನಿಷ್ಠ ಇಪ್ಪತ್ತು ವರ್ಷಗಳು ಬಾಳಿಕೆ ಬರಬೇಕು ಕಳಪೆ ಕಾಮಗಾರಿ ಮಾಡಿದರೆ ಕೇವಲ ಒಂದೇ ವರ್ಷದಲ್ಲಿ ರಸ್ತೆ ಸಂಪೂರ್ಣವಾಗಿ ಹಾಳಾಗುತ್ತದೆ, ಗುಣಮಟ್ಟವಿಲ್ಲದೆ ಕಳಪೆ ಮಾಡಿದರೆ ಏನೂ ಪ್ರಯೋಜನ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಹಂಪಾಪುರದ ರೈಲ್ವೇ ಗೇಟ್ ನಿಂದ ಸನ್ಯಾಸಿಪುರ ಮಾರ್ಗವಾಗಿ ಹಳೇ ಕಾವೇರಿ ಸೇತುವೆ ಮೂಲಕ ಹಾಸನ- ಮೈಸೂರು ಸಂಪರ್ಕದ ರಸ್ತೆ ಐದು ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಸಂಪೂರ್ಣವಾಗಿ ಕಳಪೆಯಾಗಿದೆ ಎಂದು ಸಾರ್ವಜನಿಕರು ದೂರಿನ ಹಿನ್ನೆಲೆಯಲ್ಲಿ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.
ಕಳೆದ ಹದಿನೈದು ವರ್ಷಗಳ ನನ್ನ ಶಾಸಕತ್ವದ ಅವದಿಯಲ್ಲಿ ಕಳಪೆ ಮಟ್ಟದ ರಸ್ತೆ ನಿರ್ಮಿಸಿಲ್ಲ ಎಂದು ಸ್ಪಷ್ಟ ಪಡಿಸಿದ ಮಾಜಿ ಸಚಿವರು ಅಂದಾಜು ಪಟ್ಟಿಯಲ್ಲಿ ಏನೂ ಅನುಮೋದನೆ ಆಗಿದೆ ಆ ರೀತಿಯಲ್ಲಿ ಕಾಮಗಾರಿ ಮಾಡಿ ಇಲ್ಲದಿದ್ದರೆ ಒಂದೇ ಒಂದು ನಯಾಪೈಸಾ ಹಣ ಬಿಡುಗಡೆ ಮಾಡದಂತೆ ಹೋರಾಟ ಮಾಡಲಾಗುತ್ತದೆ ಎಂದು ಗುತ್ತಿಗೆದಾರರಿಗೆ ಹಾಗೂ ಇಂಜಿನಿಯರ್ ಅವರಿಗೆ ಎಚ್ಚರಿಕೆ ನೀಡಿದರು.

ಎರಡು ಕೀ.ಮೀಟರ್ ರಸ್ತೆ ನಿರ್ಮಾಣ ಮಾಡಲು ಐದು ಕೋಟಿ ಹಣ ಬಿಡುಗಡೆ ಮಾಡಲಾಗಿದೆ, ರಸ್ತೆ ಅಭಿವೃದ್ಧಿ ಕಾಮಗಾರಿ ಮಾಡಲು ಗುತ್ತಿಗೆದಾರರು ಅಂದಾಜು ಪಟ್ಟಿಯಲ್ಲಿ ಏನಿದೆ ಆ ರೀತಿಯಲ್ಲಿ ಮಾಡುತ್ತಿಲ್ಲ, ಮೊದಲು ಮಣ್ಣು ಹಾಕಿ ಎಂಬಾಕುಮೆಂಟ್ ಮಾಡಿದ ಬಳಿಕ 40 ಎಂ.ಎಂ. ಜಲ್ಲಿ ಹಾಕಿ ರೋಲರ್ ಮಾಡಿದ ನಂತರ ವೆಸ್ಟ್ ಮಿಕ್ಸ್ ಜೆಲ್ಲಿ ಹಾಕಿ ಉತ್ತಮ ಗುಣಮಟ್ಟದ ರಸ್ತೆ ಮಾಡ ಬೇಕು ಅದರೆ ಈ ರಸ್ತೆಗೆ ಇದ್ಯಾವುದು ಮಾಡಿಲ್ಲ ಎಂದು ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಸಿದ್ದೇಶ್ವರ ಪ್ರಸಾದ್ ಅವರಿಗೆ ತರಾಟೆ ತೆಗೆದು ಕೊಂಡರು.
ಬಳಿಕ ಮಾಜಿ ಸಚಿವ ಸಾ.ರಾ.ಮಹೇಶ್ ಅವರು ಮಾಧ್ಯಮರೊಂದಿಗೆ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಈಗಾಗಲೇ ಎಂಟು ಲಕ್ಷ ಕೋಟಿ ಸಾಲ ಮಾಡಿ ರಾಜ್ಯದ ಜನತೆ ಮೇಲೆ ತಲಾ ಒಂದು ಲಕ್ಷ ಸಾಲ ವಿದಿಸಿದೆ, 2026 ನೇ ಸಾಲಿನ ಬಜೆಟ್ ಗೆ ಒಂದೂವರೆ ಲಕ್ಷ ಕೋಟಿ ಸಾಲ ಮಾಡಲು ಸಿದ್ದರಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷದವರು ಹಿಂದಿನ ಸರ್ಕಾರವನ್ನು ನಲವತ್ತು ಪರ್ಸೆಂಟ್ ಪಡೆದು ಗುತ್ತಿಗೆ ನೀಡುತ್ತಿದ್ದಾರೆ ಎಂದು ಬೊಬ್ಬೆ ಹೊಡೆದು ಅಧಿಕಾರಕ್ಕೆ ಬಂದ ಇವರು ಕಾಮಗಾರಿ ಗುತ್ತಿಗೆ ನೀಡಲು ಆರವತ್ತು ಪರ್ಸೆಂಟ್ ಪಡೆಯುತ್ತಿದ್ದಾರೆ ಎಂದು ಆರೋಪ ಮಾಡಿದರು.
ಇದಕ್ಕೂ ಮೊದಲು ಮಾಜಿ ಸಚಿವ ಸಾ.ರಾ.ಮಹೇಶ್ ಅವರು ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಸಮುಖದಲ್ಲಿ ಈಗಾಗಲೇ ಅರ್ಧದಷ್ಟು ರಸ್ತೆ ಕಾಮಗಾರಿ ಕೆಲಸ ಮಾಡಿದ್ದನ್ನು ಸ್ಥಳೀಯ ಗ್ರಾಮದವರಿಂದ ಹಾರೆ ಗುದ್ದಲಿ ಮೂಲಕ ಅಗೆದು ಪರಿಶೀಲಿಸಿ ನೋಡಿ ಸಂಪೂರ್ಣವಾಗಿ ಕಳಪೆಯಾಗಿಲ್ಲವೇ ಎಂದು ಹರಿಹಾಯ್ದರು.
ಕೇಂದ್ರ ಸರ್ಕಾರದ ದಿಶಾ ಸಮಿತಿ ಸದಸ್ಯ ಹಾಗೂ ತಾಲೂಕು ಜಾದಳ ಅಧ್ಯಕ್ಷ ಹಂಪಾಪುರ ಕುಮಾರ್, ಜಿಲ್ಲಾ ಗ್ರಾಮಾಂತರ ಯುವ ಜೆಡಿಎಸ್ ಉಪಾಧ್ಯಕ್ಷ ಕಗ್ಗರೆ ಕುಚೇಲ, ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಡಿ.ವಿ.ಗುಡಿ ಯೋಗೇಶ್, ತಾಲೂಕು ಯುವ ಜೆಡಿಎಸ್ ಎಸ್.ಸಿ. ಘಟಕದ ಅಧ್ಯಕ್ಷ ಹಂಪಾಪುರ ಸೂರಿ, ಜೆಡಿಎಸ್ ನಗರ ಕಾರ್ಯದರ್ಶಿ ರುದ್ರೇಶ್(ಅಯ್ತ), ಜೆಡಿಎಸ್ ನಗರ ಮಹಿಳಾ ಘಟಕದ ಕಾರ್ಯದರ್ಶಿ ಭಾಗ್ಯಲಕ್ಣ್ಮಿ,
ಜೆಡಿಎಸ್ ಮುಖಂಡರಾದ ಹಂಪಾಪುರ ರಮೇಶ್, ಧನಪಾಲ್, ಶಂಭು, ರಾಜೇಶ್, ಗುರು ಪ್ರಸಾದ್, ಹೆಚ್.ಜಿ.ಮಂಜು, ಸನ್ಯಾಸೀಪರ ಗ್ರಾಮದ ಮೋಹನ್ ರಾಜ್, ಸಂತೋಷ್, ಶಿವಲಿಂಗ, ಉಮೇಶ್, ಚಿಕ್ಕಯ್ಯ, ಮೊದಲಾದವರು ಇದ್ದರು.



