ಪಿರಿಯಾಪಟ್ಟಣ: ಗ್ರಾಮಾಂತರ ಪ್ರದೇಶದ ಮಹಿಳೆಯರ ಸಬಲೀಕರಣ ಮತ್ತು ಅಭಿವೃದ್ಧಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪಾತ್ರ ಅಪಾರವಾಗಿದೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ನಿಕಟ ಪೂರ್ವ ಅಧ್ಯಕ್ಷರಾದ ಶಿಕ್ಷಕ ಗೊರಳ್ಳಿ ಜಗದೀಶ್ ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಬೆಟ್ಟದಪುರ ಯೋಜನಾ ಕಚೇರಿ ವತಿಯಿಂದ ಜ್ಞಾನ ವಿಕಾಸ ಕಾರ್ಯಕ್ರಮದಡಿ ಬೆಟ್ಟದಪುರದ ವಿನಾಯಕ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೊಷ್ಟಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು, ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಸಮಾಜದ ಬದಲಾವಣೆಗೆ ಸಹಕರಿಸಬೇಕು ಎಂದರು.
ಬೆಟ್ಟದಪುರ ಎಸ್ಎಂಎಸ್ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎ.ವಿ ಛಾಯಾ ಅವರು ಮಾತನಾಡಿ ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಅಪಾರವಾಗಿದ್ದು ಸಂಘ ಸಂಸ್ಥೆಗಳ ನೆರವಿನೊಂದಿಗೆ ಆರ್ಥಿಕವಾಗಿ ಸಬಲರಾಗುವಂತೆ ತಿಳಿಸಿದರು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕೊಡಗು ಜಿಲ್ಲಾ ಉಪಾಧ್ಯಕ್ಷರಾದ ಬಿ.ಜೆ ದೇವರಾಜು ಅವರು ಮಾತನಾಡಿ ಮಹಿಳೆಯರಿಗೆ ಸಂಸ್ಥೆ ವತಿಯಿಂದ ವಿಚಾರ ಸಂಕೀರ್ಣ ಮತ್ತು ಕಾರ್ಯಗಾರ ಆಯೋಜಿಸುವಂತೆ ಪುರುಷರಿಗೂ ಕಾರ್ಯಕ್ರಮ ಆಯೋಜಿಸಿ ಬದಲಾವಣೆಗೆ ಸಹಕರಿಸುವಂತೆ ತಿಳಿಸಿದರು.
ದಿಡ್ಡಿಯಮ್ಮ ಶಾಲೆಯ ಶಿಕ್ಷಕರಾದ ರಿಹಾನಾ ಬಾನು ರವರು ಮಾತನಾಡಿ ಸಂಸ್ಥೆಯ ವತಿಯಿಂದ ಸರ್ವಧರ್ಮದ ಅಭಿವೃದ್ಧಿಗಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಸದುಪಯೋಗ ಪಡೆಯುವಂತೆ ತಿಳಿಸಿದರು.
ಸಿಡಿಪಿಓ ಇಲಾಖೆ ಮೇಲ್ವಿಚಾರಕಿ ಸವಿತಾ ಅವರು ಮಾತನಾಡಿ ಮಕ್ಕಳನ್ನು ಉತ್ತಮ ನಾಗರಿಕರಾಗಿ ರೂಪಿಸುವಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ, ಸಾಮಾಜಿಕ ಜಾಲತಾಣಗಳನ್ನು ಒಳ್ಳೆಯ ವಿಷಯಗಳ ಆಯ್ಕೆಗೆ ಬಳಸುವಂತೆ ಕಿವಿಮಾತು ಹೇಳಿದರು.
ಕೊಡಗು ಜಿಲ್ಲಾ ನಿರ್ದೇಶಕರಾದ ಲೀಲಾವತಿ ಅವರು ಮಾತಾನಾಡಿ ಮಹಿಳಾ ಸಬಲೀಕರಣವಾದರೆ ದೇಶದ ಅಭಿವೃದ್ಧಿಯಾದಂತೆ, ಪುರುಷಪ್ರಧಾನ ಸಮಾಜದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಸಾಧನೆ ತೋರುತ್ತಿರುವುದು ಶ್ಲಾಘನೀಯ ಎಂದರು.
ಈ ವೇಳೆ ಸ್ವಸಹಾಯ ಸಂಘದ ಸದಸ್ಯರು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು, ವಿವಿಧ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಎ.ಎಸ್ ಮಲ್ಲೇಶ್, ಯೋಜನಾಧಿಕಾರಿ ಸಂತೋಷ್ ಕುಮಾರ್ ಜೈನ್, ಕಿತ್ತೂರು ವಲಯ ಮೇಲ್ವಿಚಾರಕ ಹೇಮಂತ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಮಮಿತಾ, ಸೇವಾ ಪ್ರತಿನಿಧಿಗಳು ಒಕ್ಕೂಟ ಅಧ್ಯಕ್ಷರು ಮತ್ತು ಸದಸ್ಯರು ಇದ್ದರು.
