201 ಸ್ಮಾರ್ಟ್ಫೋನ್ಗಳನ್ನು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ರೈಲ್ವೆ ಸುರಕ್ಷತಾ ಪಡೆ (ಆರ್ಪಿಎಫ್) ಸಿಬ್ಬಂದಿ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಸೋಮವಾರ ವಶಪಡಿಸಿಕೊಂಡಿದ್ದಾರೆ. ಅವುಗಳ ಮೌಲ್ಯ ₹ 10.05 ಲಕ್ಷ ಎಂದು ಅಂದಾಜಿಸಲಾಗಿದೆ.ಕೇರಳ ರಾಜ್ಯದ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಚಿನ್ನ, ನಗದು, ಮತ್ತಿತರ ಬೆಲೆಬಾಳುವ ವಸ್ತುಗಳು ರೈಲಿನ ಮೂಲಕ ಆ ರಾಜ್ಯಕ್ಕೆ ಕಳ್ಳಸಾಗಣೆಯಾಗುವುದನ್ನು ತಪ್ಪಿಸಲು ಆರ್ಪಿಎಫ್ ಸಿಬ್ಬಂದಿಯು ರೈಲುಗಳಲ್ಲಿ ತಪಾಸಣಾ ಕಾರ್ಯವನ್ನು ತೀವ್ರಗೊಳಿಸಿದ್ದಾರೆ. ಸ್ಮಾರ್ಟ್ಫೋನ್ಗಳಿದ್ದ ಬ್ಯಾಗ್ ಈ ತಪಾಸಣೆ ವೇಳೆ ಪತ್ತೆಯಾಗಿದೆ.
ರೈಲು ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸಿದ್ದ ಸಿಬ್ಬಂದಿ ದೇಹದಲ್ಲಿ ಧರಿಸಿದ್ದ ಕ್ಯಾಮೆರಾಗಳಲ್ಲಿ (ಬಾಡಿ ವೋರ್ನ್ ಕ್ಯಾಮೆರಾ) ದಾಖಲಾದ ದೃಶ್ಯಗಳನ್ನು ಪರಿಶೀಲಿಸಲಾಗಿದೆ. ಈ ಬೋಗಿಯಲ್ಲಿ ತಪಾಸಣಾ ಕಾರ್ಯ ನಡೆಯುತ್ತಿದ್ದಾಗ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದವಾಗಿ ವರ್ತಿಸಿರುವುದು ಕಂಡುಬಂದಿದೆ. ಅಪರಾಧ ಗುಪ್ತವಾರ್ತೆ ಶಾಖೆ ಮತ್ತು ವಿಭಾಗೀಯ ಅಪರಾಧ ತಡೆ ಮತ್ತು ಪತ್ತೆ ದಳದ ನೆರವಿನೊಂದಿಗೆ ಈ ಅನುಮಾನಾಸ್ಪದ ವ್ಯಕ್ತಿಗಳ ಪತ್ತೆಗೆ ಕ್ರಮ ವಹಿಸಲಾಗಿದೆ. ಈ ಬಗ್ಗೆ ಸರ್ಕಾರದ ಜೊತೆಗೂ ಮಾಹಿತಿ ಹಂಚಿಕೊಳ್ಳಲಾಗಿದ್ದು, ರೈಲ್ವೆ ಪೊಲೀಸರು ಪ್ರಕರಣದ ತನಿಖೆಯನ್ನು ಹಾಗೂ ವಶಪಡಿಸಿಕೊಂಡ ಸ್ವತ್ತುಗಳ ಕುರಿತ ಕಾನೂನು ಪ್ರಕ್ರಿಯೆಯನ್ನು ಮುಂದುವರಿಸಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.



