ಬೆಂಗಳೂರು : ಸರಕಾರಿ ಸ್ಥಳಗಳಲ್ಲಿ ಖಾಸಗಿ ಸಂಸ್ಥೆಗಳ ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆಗೆ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆ ಪ್ರಶ್ನಿಸಿ ಸರ್ಕಾರದ ಪರವಾಗಿ ಸಲ್ಲಿಕೆಯಾದ ಮೇಲ್ಮನವಿ ಅರ್ಜಿಯ ವಿಚಾರಣೆ ಹೈಕೋರ್ಟ್ ಧಾರವಾಡದ ವಿಭಾಗೀಯ ಪೀಠದಲ್ಲಿ ಮಂಗಳವಾರ ನಡೆಯಿತು.
ರಾಷ್ಟ್ರೀಯ ಸ್ವಯಂಸೇವಕ ಸಂಸ್ಥೆಯ ಚಟುವಟಿಕೆಗಳಿಗೆ ಪರೋಕ್ಷ ನಿಷೇಧ ಹೇರುವ ಉದ್ದೇಶದಿಂದ ಈ ನಿರ್ಬಂಧ ವಿಧಿಸಲಾಗಿದೆ ಎನ್ನಲಾಗಿದೆ. 10 ಜನಕ್ಕಿಂತ ಹೆಚ್ಚು ಜನರು ಸೇರಿಕೊಂಡರೆ ಅದನ್ನು ಅಕ್ರಮ ಕೂಟವೆಂದು ಪರಿಗಣಿಸುವ ಅಧಿಸೂಚನೆ ನಾಗರಿಕರ ಹಕ್ಕಿಗೆ ಧಕ್ಕೆ ಎಂದು ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿತ್ತು.
ಈ ತೀರ್ಪಿನ ವಿರುದ್ಧ ಹಾಗೂ ಸರಕಾರದ ಪರ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದರು. ಸರ್ಕಾರದ ಸ್ವತ್ತುಗಳಿಗೆ ಹಾನಿಯಾಗಬಾರದೆಂಬ ಉದ್ದೇಶದಿಂದಲೇ ನಿರ್ಬಂಧ ವಿಧಿಸಲಾಗಿದೆ. ಖಾಸಗಿ ಸಂಸ್ಥೆಗಳು ಸರ್ಕಾರಕ್ಕೆ ಸಂಬಂಧಿಸಿದ ಆಸ್ತಿಯಲ್ಲಿ ಅನುಮತಿಯಿಲ್ಲದೆ ಯಾವುದೇ ಕಾರ್ಯಕ್ರಮ ನಡೆಸುವಂತಿಲ್ಲ. ಹೈಕೋರ್ಟ್ ಕಟ್ಟಡ ಖಾಲಿ ಇದೆ ಎಂದು ಅಲ್ಲಿ ಕಾರ್ಯಕ್ರಮ ಮಾಡಲಾಗುವುದಿಲ್ಲ. ಅದೇ ರೀತಿಯಲ್ಲಿ ಸಾರ್ವಜನಿಕ ಸ್ಥಳಗಳ ಬಳಕೆಗೂ ಅನುಮತಿ ಅಗತ್ಯ ಎಂದು ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡನೆ ಮಾಡಿದರು.
ಪಾರ್ಕ್, ಮೈದಾನ ಎಲ್ಲವೂ ಸರ್ಕಾರದ ಸ್ವತ್ತೆಂದು ಭಾವಿಸಬಾರದು. ಮೈದಾನದಲ್ಲಿ ಕ್ರಿಕೆಟ್ ಆಡಲೂ ಅನುಮತಿ ಬೇಕೆಂಬಂತೆ ನಿಯಮ ತರಲಾಗಿದೆ. ಪೊಲೀಸ್ ಕಾಯ್ದೆಯ ಪ್ರಕಾರ ಕ್ರಮ ಕೈಗೊಳ್ಳುವ ಅಧಿಕಾರ ಜಿಲ್ಲಾ ದಂಡಾಧಿಕಾರಿಗೆ ಮಾತ್ರವಿದೆ. ಏಕಸದಸ್ಯ ಪೀಠದಲ್ಲೇ ತಡೆಯಾಜ್ಞೆ ತೆರವಿಗೆ ಅರ್ಜಿ ಸಲ್ಲಿಸಬಹುದಿತ್ತು, ಮೇಲ್ಮನವಿಗೆ ಅಷ್ಟೇ ಸರ್ಕಾರ ಬಂದುಕೊಂಡಿದೆ ಎಂದು ಪ್ರತಿವಾದಿ ಪುನಶ್ಚೇತನ ಸೇವಾ ಸಂಸ್ಥೆ ಪರ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ವಾದಿಸಿದರು.
ಸರ್ಕಾರ ಹಾಗೂ ಪುನಶ್ಚೇತನ ಸೇವಾ ಸಂಸ್ಥೆ ಪರ ವಕೀಲರ ವಾದ ಆಲಿಸಿದ ನಂತರ ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು ಕಾಯ್ದಿರಿಸಿದೆ. ನವೆಂಬರ್ 7ರಂದು ಈ ಕುರಿತು ಮುಂದಿನ ವಿಚಾರಣೆ ನಡೆಯಲಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಸರ್ಕಾರಿ ಜಾಗಗಳಲ್ಲಿ ಖಾಸಗಿ ಸಂಸ್ಥೆಗಳ ಚಟುವಟಿಕೆಗಳನ್ನು ನಿರ್ಬಂಧಿಸುವ ಬಗ್ಗೆ ಹಿಂದಿನ ಸರ್ಕಾರ ಹೊರಡಿಸಿದ್ದ ಆದೇಶವನ್ನು ಈ ಸರ್ಕಾರ ಬಿಗಿ ಮಾಡಿತ್ತು. ಇದರ ಹಿಂದೆ ಆರೆಸ್ಸೆಸ್ ನ ನೂರು ವರ್ಷಗಳ ಪಥಸಂಚಲನ ಮತ್ತಿತರ ಕಾರ್ಯಕ್ರಮಗಳ ನಿರ್ಬಂಧ ಉದ್ದೇಶ ಎನ್ನಲಾಗಿದೆ. ಇದನ್ನು ಪ್ರಶ್ನಿಸಿ ಪುನಶ್ಚೇತನ ಸೇವಾ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ಪೀಠ, ಸರ್ಕಾರದ ಆದೇಶಕ್ಕೆ ಅಕ್ಟೋಬರ್ 28 ರಂದು ಮಧ್ಯಂತರ ತಡೆಯಾಜ್ಞೆ ನೀಡಿ ತೀರ್ಪು ಪ್ರಕಟಿಸಿತ್ತು.



