ಬೆಂಗಳೂರು: ಮಾಹಿತಿ ಹಕ್ಕು ಕಾಯ್ದೆ (RTI) ಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು, ಪದವಿ ಹಾಗೂ ಪದವಿಪೂರ್ವ ಶಿಕ್ಷಣದಲ್ಲಿಯೇ ಈ ವಿಷಯವನ್ನು ಪಠ್ಯವಾಗಿಸಲು ರಾಜ್ಯ ಮಾಹಿತಿ ಆಯೋಗ ರಾಜ್ಯ ಸರ್ಕಾರಕ್ಕೆ ಶಿಫಾರಸು ಸಲ್ಲಿಸಿದೆ.
ಈ ಕುರಿತು ಜುಲೈ 14 ರಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಉನ್ನತ ಮಟ್ಟದ ಸಭೆಯಲ್ಲಿ ಚರ್ಚೆ ನಡೆಯಲಿದ್ದು, ಮಾಹಿತಿ ಆಯುಕ್ತರು, ರಾಜ್ಯ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರನ್ನು ಭೇಟಿಯಾಗಿ ಶಿಫಾರಸುಗಳ ಪಟ್ಟಿಯನ್ನು ಸಲ್ಲಿಸಿದ್ದಾರೆ.
ವಿದ್ಯಾರ್ಥಿಗಳಿಗೆ RTI ಅಧಿನಿಯಮದ ಅರಿವು ಮೂಡಿಸುವ ಉದ್ದೇಶದಿಂದ ಪಠ್ಯ ಪರಿಷ್ಕರಣೆ ಮಂಡಳಿಗಳು ಹಾಗೂ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಮಂಡಳಿಗಳಿಗೆ ಶಿಫಾರಸು ನೀಡಬೇಕು ಎಂದು ತಿಳಿಸಿದ್ದಾರೆ. ಜೊತೆಗೆ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳಲ್ಲೂ RTI ಬಗ್ಗೆ ಜಾಗೃತಿ ಕಡಿಮೆ ಇದ್ದು, ಕೆಪಿಎಸ್ಸಿ, ಕೆಇಎಎಸ್ ಮತ್ತು ಇತರ ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲೂ RTIಯನ್ನು ಅಂಕಪತ್ರದಲ್ಲಿ ಸೇರಿಸಬೇಕು. ಇದರಲ್ಲಿ ಉತ್ತೀರ್ಣರಾದರೇ ಬಡ್ತಿ ಹಾಗೂ ವೇತನ ಪರಿಷ್ಕರಣೆಗೆ ಅವಕಾಶ ನೀಡುವಂತೆ ಸೂಚಿಸಲಾಗಿದೆ.
ಜಿಲ್ಲಾ ತರಬೇತಿ ಸಂಸ್ಥೆಗಳು, ಮೈಸೂರು ಆಡಳಿತ ತರಬೇತಿ ಸಂಸ್ಥೆ ಹಾಗೂ ಇತರ ಸಂಸ್ಥೆಗಳಲ್ಲಿ RTI ತರಬೇತಿಯನ್ನು ನಿರಂತರವಾಗಿ ನೀಡಬೇಕು. ಹಾಗೆಯೇ, ಸದ್ಯ ಪೂರಕವಾಗಿ ಇರುವ RTI ಡ್ಯಾಶ್‍ಬೋರ್ಡ್‌ನ್ನು ರಾಜ್ಯ ಮಾಹಿತಿ ಆಯೋಗದ ನಿಯಂತ್ರಣಕ್ಕೆ ನೀಡಬೇಕು.
RTI ಕಾಯ್ದೆಯ 4(1)(ಎ) ಮತ್ತು 4(1)(ಬಿ) ಅಡಿಯಲ್ಲಿ ಎಲ್ಲಾ ಸಾರ್ವಜನಿಕ ಪ್ರಾಧಿಕಾರಗಳಲ್ಲಿ ಮಾಹಿತಿ ಬಿಡುಗಡೆ ಕಡ್ಡಾಯವಾಗಬೇಕೆಂಬ ಸುತ್ತೋಲೆಯನ್ನೂ ಸರ್ಕಾರ ಹೊರಡಿಸಬೇಕು ಎಂದು ಆಗ್ರಹಿಸಲಾಗಿದೆ.
ಇದಲ್ಲದೆ, ಬೆಂಗಳೂರು ಮಾಹಿತಿ ಆಯೋಗ ಕಟ್ಟಡದಲ್ಲಿ ಹೊಸ ಮಹಡಿ ನಿರ್ಮಿಸಿ ಬಾಡಿಗೆ ವೆಚ್ಚ ಕಡಿಮೆ ಮಾಡಬೇಕು ಹಾಗೂ ಗನ್‍ಮ್ಯಾನ್ ಮತ್ತು ಭದ್ರತಾ ವ್ಯವಸ್ಥೆ ಆಯುಕ್ತರಿಗೂ ಒದಗಿಸಬೇಕು ಎಂಬ ಬೇಡಿಕೆಯಾಗಿವೆ.