Thursday, August 21, 2025
Google search engine

Homeರಾಜ್ಯಸುದ್ದಿಜಾಲಎಸ್.ಎಲ್. ಭೈರಪ್ಪನವರು ವಿಶ್ವದ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರು: ಸುರೇಶ್ ಋಗ್ವೇದಿ

ಎಸ್.ಎಲ್. ಭೈರಪ್ಪನವರು ವಿಶ್ವದ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರು: ಸುರೇಶ್ ಋಗ್ವೇದಿ

ಚಾಮರಾಜನಗರ: ಬ್ರಹ್ಮಾಂಡದ ದಿವ್ಯ ಚಿಂತನೆಗಳನ್ನು, ತತ್ವಗಳನ್ನು ತಮ್ಮ ಅನುಭವ, ಅಧ್ಯಯನದ ಮೂಲಕ ಸಾಹಿತ್ಯ ರೂಪದಲ್ಲಿ ನೀಡುತ್ತಿರುವ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಎಸ್ ಎಲ್ ಭೈರಪ್ಪನವರು ವಿಶ್ವದ ಶ್ರೇಷ್ಠ ಸಾಹಿತಿಗಳಾಗಿ ,ಕನ್ನಡಿಗರಾಗಿ ಇರುವುದು ನಮ್ಮೆಲ್ಲರ ಪುಣ್ಯವೆಂದು ಸಂಸ್ಕೃತಿ ಚಿಂತಕ ,ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಋಗ್ವೇದಿ ಯೂತ್ ಕ್ಲಬ್ ಹಮ್ಮಿಕೊಂಡಿದ್ದ ಎಸ್ ಎಲ್ ಭೈರಪ್ಪನವರ ಸಾಹಿತ್ಯ ಕೊಡುಗೆಗಳು ,ಜನ್ಮದಿನ ,ವಿಶೇಷ ಪೂಜೆ, ಸಿಹಿ ಹಂಚಿಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಬೈರಪ್ಪನವರ ಕಾದಂಬರಿಗಳು ಕೋಟಿ ಕೋಟಿ ಓದುಗರನ್ನು ಸೃಷ್ಟಿ ಮಾಡಿದೆ. ಸಾಹಿತ್ಯದಿಂದ ದೂರ ಹೋಗುತ್ತಿರುವ ಕಾಲಘಟ್ಟದಲ್ಲಿ ಅತ್ಯಂತ ಸೂಕ್ಷ್ಮತೆಯಿಂದ ಸರ್ವರನ್ನು ಆಕರ್ಷಿಸಿ, ತಮ್ಮ ಸಾಹಿತ್ಯದ ಬರವಣಿಗೆ ಮೂಲಕ ಓದುಗರನ್ನು ಸೃಷ್ಟಿ ಮಾಡಿ ವಿಶ್ವ ಪ್ರಸಿದ್ಧರಾಗಿರುವ ಬೈರಪ್ಪನವರು 95 ವರ್ಷಗಳಲ್ಲೂ ತಮ್ಮೊಂದಿಗೆ ನವಲವಿಕೆಯಿಂದ ಇರುವುದು ಭಾರತೀಯರ ಪುಣ್ಯ. ಬಾಲ್ಯದಿಂದಲೇ ಅಪಾರ ಸಂಕಷ್ಟಗಳಿಂದ ಬೆಳೆದ ಭೈರಪ್ಪನವರು ಜೀವನದ ಅನುಭವಗಳು, ಸಮಾಜದ ಚಿಂತನೆಗಳು ಹಾಗೂ ಅಂತರಂಗದ ದಿವ್ಯ ಶಕ್ತಿಯಿಂದ, ಸಂಶೋಧನೆಗಳ ಮೂಲಕ ತಮ್ಮ ಜ್ಞಾನ ಭಂಡಾರದ ಮೂಲಕ ಸಾಹಿತ್ಯ ರಚನೆ ಮಾಡಿರುವ ಭೈರಪ್ಪನವರು ಭಾರತದ ತತ್ವಶಾಸ್ತ್ರದ ಚಿಂತನೆಗಳನ್ನು ಇಡೀ ವಿಶ್ವಕ್ಕೆ ನೀಡಿದವರು .ಅವರ ಕಾದಂಬರಿಗಳು ಓದುಗರ ಚಿಂತನೆಗು ಕಾರಣವಾಗಿರುವುದು ಕಾಣಬಹುದು .ಅವರ ಪರ್ವ ಕೃತಿ ಮಹಾಭಾರತದ ನವ ದೃಷ್ಟಿಕೋನ ವೈಚಾರಿಕತೆ ಹಾಗೂ ಮನಸ್ಸಿನ ವಿಶ್ಲೇಷಣೆಯೊಂದಿಗೆ ಬರದ ಅಮೂಲ್ಯವಾದ ಕಾದಂಬರಿಯಾಗಿದೆ.


ಇವರ ಗೃಹಭಂಗ ,ದಾಟು ,ವಂಶವೃಕ್ಷ, ಸಾರ್ಥ, ಮಂತ್ರ ,ಆವರಣ ,ತಂತು ಮತದಾನ ,ತಬ್ಬಲಿಯು ನೀನಾದೆ ಮಗನೇ ಕಾದಂಬರಿಗಳು ಹಲವಾರು ಬಾರಿ ಮುದ್ರಣವಾಗುತ್ತಿದೆ, ಸತ್ಯಾ ಮತ್ತು ಸೌಂದರ್ಯದ ಬಗ್ಗೆ ಸಂಶೋಧನೆ ನಡೆಸಿ ಪಿ ಎಚ್ ಡಿ ಪಡೆದು ಭಾರತೀಯ ಸಂಸ್ಕೃತಿ, ಪರಂಪರೆ ತತ್ವಶಾಸ್ತ್ರ, ತರ್ಕಶಾಸ್ತ್ರ, ಕಲೆ ,ಸಾಹಿತ್ಯ, ಸಂಗೀತ, ಇತಿಹಾಸ, ಧರ್ಮ, ಸೃಜನಶೀಲತೆ, ಮನುಷ್ಯ ಸಂಬಂಧ, ರಾಜಕೀಯ ಚಿತ್ರಣ, ಮಾನವ ಸಂಬಂಧಗಳ ಸೂಕ್ಷ್ಮತೆಯನ್ನು, ಗ್ರಾಮೀಣ ಬದುಕಿನ ಚಿತ್ರಣ, ಜಾತಿ ವ್ಯವಸ್ಥೆಯ ಬಗ್ಗೆಯೂ ಅವರ ಕಾದಂಬರಿಗಳು ಬಹಳಷ್ಟು ಪ್ರಭಾವಶಾಲಿಯಾಗಿ ಮಾನವನನ್ನು ಸತ್ವ ಶಾಲಿಯನ್ನಾಗಿ ರೂಪಿಸಿದೆ.

ಭೈರಪ್ಪನವರ ಕಾದಂಬರಿಗಳು ಹಲವಾರು ನಾಟಕಗಳಾಗಿ, ಚಲನಚಿತ್ರಗಳಾಗಿ, ಧಾರಾವಾಹಿಗಳಾಗಿ ಸಮಾಜಕ್ಕೆ ಪರಿಣಾಮಕಾರಿಯಾದ ಪ್ರಭಾವವನ್ನು ಬೀರಿದೆ. ದೇಶ ವಿದೇಶಗಳ ಸಂಸ್ಕೃತಿ ,ಪರಂಪರೆ ಗ್ರಾಮೀಣ ಬದುಕು, ಗ್ರಾಮೀಣ ಜೀವನ , ವ್ಯಕ್ತಿಗಳ ಅಂತರ್ಮುಖಿ ಚಿಂತನೆ ಹಾಗೂ ಸಮಗ್ರವಾದ ನಿರಂತರವಾದ ಅಧ್ಯಯನದ ಜ್ಞಾನದ ಚಿಂತನೆಯ ಮೂಲಕ ಸಾಹಿತ್ಯವನ್ನು ರಚಿಸಿ ವಿಶ್ವ ಮಾನ್ಯ ಸಾಹಿತಿಯಾಗಿ ಭೈರಪ್ಪನವರು ಭಾರತದಲ್ಲಿ ಇರುವುದು ಹೆಮ್ಮೆಯಾಗಿದೆ .ಅವರ ಸಾಹಿತ್ಯ ಸೇವೆಯ ಜೊತೆಗೆ ಅಪಾರ ಸಮಾಜ ಸೇವೆಯನ್ನು ನೀಡಿ ಸಮಾಜದ ಪರಿವರ್ತನೆಗೊ ಕಾರಣರಾಗಿದ್ದಾರೆ.

ಬೈರಪ್ಪನವರ ಸಮಾಜ ಸೇವೆಗೆ ಇತ್ತೀಚೆಗೆ ಅವರ ಹುಟ್ಟಿದ ಊರಿಗೆ ಕೆರೆಯನ್ನು ನಿರ್ಮಿಸುವ ಮೂಲಕ ಲಕ್ಷಾಂತರ ಜನರ ಬದುಕಿಗೆ ಕಾರಣವಾಗಿರುವ ಭೈರಪ್ಪ ನವರು ಮಾನವ ಶ್ರೇಷ್ಠ ಜೀವಿಯಾಗಿ ಮಾನವನ ಶ್ರೇಷ್ಠತೆಯನ್ನು ಹಾಗೂ ಮಹತ್ವವನ್ನು ಯುವ ಪೀಳಿಗೆಗೆ ನೀಡಿದ್ದಾರೆ . ಇವರ ಸೇವೆಯನ್ನು ಪರಿಗಣಿಸಿ ಪದ್ಮಭೂಷಣ, ಪದ್ಮಶ್ರೀ, ಹಾಗೂ ನೂರಾರು ಪ್ರಶಸ್ತಿಗಳು ದೊರೆತಿವೆ. ಭೈರಪ್ಪನವರು ಭಾರತೀಯತೆಯ ಪ್ರತೀಕವಾಗಿ ಭಾರತದ ಇತಿಹಾಸ, ಧರ್ಮ, ಸಂಸ್ಕೃತಿ ,ಪರಂಪರೆ, ಸಂಗೀತ ,ಸಾಹಿತ್ಯ, ಕಲೆ, ವಾಸ್ತುಶಿಲ್ಪ, ಮಾನವನ ಜೀವನ ಶೈಲಿಯ ಜೀವಂತಿಕೆಯ ಪ್ರತಿರೂಪವಾಗಿ ಸಾಹಿತ್ಯವನ್ನು ರಚಿಸಿ ವಿಶೇಷವಾದಂತಹ ಜ್ಞಾನದ ರಾಶಿಯನ್ನೇ ನೀಡಿದ್ದಾರೆ.

ಭೈರಪ್ಪನವರ 95ನೇ ಜನ್ಮದಿನದಲ್ಲಿ ಸಿಹಿ ಹಂಚಿ, ಭಗವಂತನಿಗೆ ಮತ್ತಷ್ಟು ಆಯಸ್ಸು ನೀಡಲು ಪ್ರಾರ್ಥಿಸಿ, ಪುಸ್ತಕಗಳನ್ನು ಅಧ್ಯಯನ ಮಾಡುವ ಭಾಗ್ಯವನ್ನು ಭಗವಂತ ನಮಗೆಲ್ಲರಿಗೂ ಕರುಣಿಸಿರುವುದೇ ಮತ್ತೊಂದು ವೈಶಿಷ್ಟ್ಯವೆಂದು ತಿಳಿಸಿದರು. ಕೋಟಿ ಕೋಟಿ ಭಾರತೀಯ ಸಾಹಿತ್ಯ ಪ್ರೇಮಿಗಳ ದಿವ್ಯ ಆಶೀರ್ವಾದ ಇವರ ಮೇಲೆ ಸದಾ ಇರಲಿ ಎಂದು ಋಗ್ವೇದಿ ತಿಳಿಸಿದರು.

ಕಾರ್ಯಕ್ರಮವನ್ನು ಹಿರಿಯ ಕನ್ನಡ ಚಳುವಳಿಗಾರ ರಾಜಗೋಪಾಲ್ ಉದ್ಘಾಟಿಸಿ ಮಾತನಾಡಿ 95 ವಸಂತಗಳ ದಿವ್ಯ ಕಾಲವನ್ನು ಸಾಹಿತ್ಯ ರಚನೆಗೆ ನೀಡಿ ಭೈರಪ್ಪನವರು ಕನ್ನಡಿಗರ ಮನೆಮನೆಯ ಸಾಹಿತಿಯಾಗಿದ್ದಾರೆ. ಭೈರಪ್ಪನವರ ಪುಸ್ತಕಗಳು ವಿಶೇಷವಾಗಿದ್ದು ಅವರ ಎಲ್ಲಾ ಸಾಹಿತ್ಯಗಳು ಮನುಷ್ಯನ ಪೂರ್ಣತೆಗೆ ತೆಗೆದುಕೊಂಡು ಹೋಗುವ ಅನುಭವ ಉಂಟುಮಾಡುತ್ತದೆ. ಅವರ ಜ್ಞಾನ ಸಾಹಿತ್ಯ , ಚಿಂತನೆಗಳು ಸಾಹಿತ್ಯ ಲೋಕದ ಹೊಸ ಅವಲೋಕನವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಋಗ್ವೇದಿ ಯೂತ್ ಕ್ಲಬ್ ಭೈರಪ್ಪನವರ ಸಾಹಿತ್ಯ ಉತ್ಸವವನ್ನು ಹಮ್ಮಿಕೊಂಡು ವಿಶೇಷ ಪೂಜೆ ಸಲ್ಲಿಸಿ ಪುಸ್ತಕಗಳನ್ನು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಹೆಮ್ಮೆಯಾಗಿದೆ ಎಂದು ತಿಳಿಸಿದರು.

ಪ್ರಸಿದ್ಧ ಜಾನಪದ ಗಾಯಕರಾದ ಸುರೇಶ್ ನಾಗ್ ಹರದನಹಳ್ಳಿ ರವರು ಮಾತನಾಡಿ ಭಾರತೀಯ ಜನಪದ, ಸಂಸ್ಕೃತಿ, ಕಲೆ ವಾಸ್ತುಶಿಲ್ಪ ,ಇತಿಹಾಸ ಹಾಗೂ ಜನರ ಪ್ರತಿಯೊಂದು ಭಾವನೆಗಳನ್ನು ಹಾಗೂ ಜೀವನ ಶೈಲಿಯನ್ನು, ಪ್ರತಿ ಗ್ರಾಮದ ಪರಂಪರೆಯನ್ನು ವಿಶೇಷವಾಗಿ ಸಾಹಿತ್ಯದ ರೂಪದಲ್ಲಿ ಬರೆದಿರುವ ಭೈರಪ್ಪನವರಿಗೆ ಭೈರಪ್ಪನವರೆ ಸಾಟಿ ಎಂದು ತಿಳಿಸಿದರು.

ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸಾರ್ವಜನಿಕರಿಗೆ ಸಿಹಿ ಹಂಚಿ ಬೈರಪ್ಪನವರ ಜನ್ಮದಿನವನ್ನು ಸಂತೋಷದಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಬಿಕೆ ಆರಾಧ್ಯ, ಶಿವಲಿಂಗ ಮೂರ್ತಿ ,ಸರಸ್ವತಿ, ರವಿಚಂದ್ರಪ್ರಸಾದ್, ಮಹೇಶ್, ಕುಮಾರ್, ಅರವಿಂದ್, ಮೋಹನ್ ಮಾದೇಶ್ ಶೆಟ್ಟಿ, ಲೋಕೇಶ್ ನಾಯ್ಕ ,ಮೃತ್ಯುಂಜಯ ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular