Tuesday, January 20, 2026
Google search engine

Homeರಾಜ್ಯಶಬರಿಮಲೆ ಅಯ್ಯಪ್ಪ ದೇಗುಲದ ಚಿನ್ನ ಕಳವು ಪ್ರಕರಣ : ಬಳ್ಳಾರಿ ಸೇರಿದಂತೆ ಹಲವೆಡೆ ಇಡಿ ದಾಳಿ

ಶಬರಿಮಲೆ ಅಯ್ಯಪ್ಪ ದೇಗುಲದ ಚಿನ್ನ ಕಳವು ಪ್ರಕರಣ : ಬಳ್ಳಾರಿ ಸೇರಿದಂತೆ ಹಲವೆಡೆ ಇಡಿ ದಾಳಿ

ತಿರುವನಂತಪುರಂ: ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದದ 4.5 ಕೆಜಿ ಚಿನ್ನದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತನ್ನ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದು, ತನಿಖೆಯ ಭಾಗವಾಗಿ ಇಡಿ ಅಧಿಕಾರಿಗಳು ಮಂಗಳವಾರ ಬೆಳ್ಳಂಬೆಳಗ್ಗೆ ಬೆಂಗಳೂರು ಮತ್ತು ಬಳ್ಳಾರಿಯಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

ಬೆಂಗಳೂರಿನ ಶ್ರೀರಾಂಪುರದಲ್ಲಿರುವ ಅಯ್ಯಪ್ಪ ದೇವಸ್ಥಾನ ಮತ್ತು ಈ ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ಉನ್ನಿಕೃಷ್ಣನ್ ಪೊಟ್ಟಿಗೆ ಸೇರಿದ ಮನೆ ಹಾಗೂ ಟ್ರಸ್ಟಿಗಳ ನಿವಾಸಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಚಿನ್ನ ಕಳವು ಪ್ರಕರಣದಲ್ಲಿ ಬಳ್ಳಾರಿಯ ಚಿನ್ನದ ವ್ಯಾಪಾರಿ ಗೋವರ್ಧನ್ ಪಾತ್ರ ಪ್ರಮುಖವಾಗಿದೆ ಎನ್ನಲಾಗಿದೆ.

ಇನ್ನೂ ಮುಖ್ಯ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ ದೇವಸ್ಥಾನದಿಂದ ಕಳವು ಮಾಡಿದ್ದ ಚಿನ್ನವನ್ನು ಗೋವರ್ಧನ್‌ಗೆ ಮಾರಾಟ ಮಾಡಿದ್ದ ಎಂಬ ಆರೋಪವಿದ್ದು, ಅಕ್ರಮವಾಗಿ 470 ಗ್ರಾಂ ಚಿನ್ನವನ್ನು ಖರೀದಿಸಿದ ಆರೋಪದ ಮೇಲೆ ಕೇರಳ ಎಸ್‌ಐಟಿ ಅಧಿಕಾರಿಗಳು ಗೋವರ್ಧನ್‌ನನ್ನು ಈಗಾಗಲೇ ಬಂಧನಕ್ಕೊಳಪಡಿಸಿದ್ದಾರೆ.

2019ರಲ್ಲಿ ಶಬರಿಮಲೆಯ ದ್ವಾರಪಾಲಕ ವಿಗ್ರಹಗಳಿಗೆ ಚಿನ್ನದ ಲೇಪನ ಮಾಡುವ ಸಂದರ್ಭದಲ್ಲಿ ಸುಮಾರು 4.5 ಕೆಜಿ ಚಿನ್ನ ನಾಪತ್ತೆಯಾಗಿತ್ತು. ಈ ಬಗ್ಗೆ ಕೇರಳ ಹೈಕೋರ್ಟ್ ತನಿಖೆಗೆ ಆದೇಶಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಶಬರಿಮಲೆಯ ಮಾಜಿ ಮುಖ್ಯ ಅರ್ಚಕ ಕಂದರಾರು ರಾಜೀವ್, ತಿರುವಾಂಕೂರು ದೇವಸ್ವಂ ಮಂಡಳಿಯ ಮಾಜಿ ಅಧ್ಯಕ್ಷರು ಸೇರಿದಂತೆ ಈಗಾಗಲೇ 12ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.

ಇನ್ನೂ ಈ ಪ್ರಕರಣದ ಬಗ್ಗೆ ನೋಡುವುದಾದರೇ ಶಬರಿಮಲೆ ದೇಗುಲದ ದ್ವಾರಪಾಲಕ ವಿಗ್ರಹಗಳ ಮೇಲಿನ ಚಿನ್ನದ ಹೊದಿಕೆ ಮತ್ತು ಶ್ರೀಕೋವಿಲ್ ಬಾಗಿಲಿನ ಚೌಕಟ್ಟುಗಳಿಂದ ಚಿನ್ನ ಕಳ್ಳತನವಾಗಿತ್ತು. ಈ ಹಿಂದೆ, ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಬಗ್ಗೆ ಕೇರಳ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.

ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಅಪರಾಧಿಗಳನ್ನು ರಕ್ಷಿಸಲು ಉದ್ದೇಶಪೂರ್ವಕ ಪ್ರಯತ್ನಗಳು ನಡೆಯುತ್ತಿವೆಯೇ ಎಂಬ ಆರೋಪ ಸಹ ಕೇಳಿ ಬಂದಿತ್ತು. ಅಯ್ಯಪ್ಪ ಸ್ವಾಮಿ ದೇಗುಲದ ವಿವಿಧ ಕಲಾಕೃತಿಗಳಿಂದ ಚಿನ್ನ ದುರುಪಯೋಗಕ್ಕಾಗಿ ನಡೆದ ಪಿತೂರಿ, ಅಧಿಕಾರಿಗಳ ಪಾತ್ರ, ಆಡಳಿತಾತ್ಮಕ ತಪ್ಪುಗಳು ಸೇರಿದಂತೆ ಹಲವು ಅಕ್ರಮಗಳ ಕುರಿತು ಸದ್ಯ ತನಿಖೆ ನಡೆಸಲಾಗುತ್ತಿದೆ.

RELATED ARTICLES
- Advertisment -
Google search engine

Most Popular