Wednesday, January 14, 2026
Google search engine

Homeಅಪರಾಧಶಬರಿಮಲೆ ತುಪ್ಪ ಹಗರಣ: 35 ಲಕ್ಷ ರೂ. ದುರುಪಯೋಗ ಆರೋಪ

ಶಬರಿಮಲೆ ತುಪ್ಪ ಹಗರಣ: 35 ಲಕ್ಷ ರೂ. ದುರುಪಯೋಗ ಆರೋಪ

ಕೇರಳ : ಶಬರಿಮಲೆ ದೇವಾಲಯ ಚಿನ್ನ ಕಳ್ಳತನ ಬಳಿಕ ಇದೀಗ ತುಪ್ಪದ ಹಗರಣ ಬೆಳಕಿಗೆ ಬಂದಿದೆ. ಈ ಬಾರಿ ದೇವಾಲಯದಲ್ಲಿ ಆದ್ಯ ಶಿಷ್ಟ ತುಪ್ಪ ಮಾರಾಟದಲ್ಲಿ 35 ಲಕ್ಷ ರೂ. ದುರುಪಯೋಗ ಪಡಿಸಿಕೊಂಡಿರುವ ಆರೋಪ ಕೇಳಿಬಂದಿದೆ.

ತಿರುವಾಂಕೂರು ದೇವಸ್ವಂ ಬೋರ್ಡ್ ಶಬರಿಮಲೆ ವಿಶೇಷ ಆಯುಕ್ತರ ವರದಿಯ ಆಧಾರದ ಮೇಲೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದ ಕೇರಳ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ವಿ.ರಾಜಾ ವಿಜಯರಾಘವನ್ ಮತ್ತು ಕೆ.ವಿ.ಜಯಕುಮಾರ್ ನೇತೃತ್ವದ ಪೀಠ ವಿಚಾರಣೆ ನಡೆಸಿತು. ಈ ಸಂಬಂಧ ವಿಜಿಲೆನ್ಸ್ ಮತ್ತು ಆಂಟಿ-ಕರಪ್ಷನ್ ಬ್ಯೂರೋ ನಿರ್ದೇಶಕರಿಗೆ ಸೂಚನೆ ನೀಡಿದ್ದು, ಉನ್ನತ ಅಧಿಕಾರಿಗಳ ತಂಡವನ್ನು ರಚಿಸಿ ಸಂಪೂರ್ಣ ತನಿಖೆ ನಡೆಸಲು ಆದೇಶಿಸಿದೆ.

2025 ನ.17ರಿಂದ ಡಿ.26ರವರೆಗೆ ಮತ್ತು 2025ರ ಡಿ.27ರಿಂದ 2026ರ ಜ.2ರವರೆಗಿನ ಅವಧಿಯಲ್ಲಿ ಈ ಅಕ್ರಮ ನಡೆದಿದೆ. ಒಂದು ಪ್ಯಾಕೆಟ್ 100 ಮಿ.ಲೀ. ತುಪ್ಪ 100 ರೂ.ಯಂತೆ ಮಾರಾಟವಾಗುತ್ತದೆ. ಸುಮಾರು 3,52,050 ಪ್ಯಾಕೆಟ್‌ಗಳನ್ನು ತಯಾರಿಸಲಾಗಿತ್ತು. ಇದರಲ್ಲಿ 89,300 ಪ್ಯಾಕೆಟ್‌ಗಳು ಮಾರಾಟವಾದರೂ ಕೇವಲ 75,450 ಪ್ಯಾಕೆಟ್‌ಗಳ ಹಣವನ್ನು ಮಾತ್ರ ಖಾತೆಗೆ ಜಮಾ ಮಾಡಲಾಗಿದೆ. ಇದರಿಂದ ಸುಮಾರು 13.68 ಲಕ್ಷ ರೂ. ಅಕ್ರಮವಾಗಿ ಉಳಿದಿದೆ.

ಓರ್ವ ಉದ್ಯೋಗಿ ಸುನಿಲ್ ಕುಮಾರ್ ಪೊಟ್ಟಿ 2025ರ ನ.24ರಿಂದ 30ರ ಅವಧಿಯಲ್ಲಿ 68,200 ರೂ.ಗಳನ್ನು ತಡವಾಗಿ ಜಮಾ ಮಾಡಿದ್ದು, ರಸೀದಿ ನೀಡದೆ ಮಾರಾಟ ಮಾಡಿದ್ದಾರೆ ಎಂದು ಈಗಾಗಲೇ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಈ ವಿಚಾರಣೆ ವೇಳೆ ಕೋರ್ಟ್ ತೀವ್ರವಾಗಿ ಟೀಕಿಸಿದ್ದು, ಕೇವಲ ಎರಡು ತಿಂಗಳಲ್ಲಿ 35 ಲಕ್ಷ ರೂ.ಗಿಂತ ಹೆಚ್ಚು ಹಣ ಅಕ್ರಮವಾದರೆ, ಉಳಿದ ಸಮಯದಲ್ಲಿ ಹಾಗೂ ಇತರ ಆದಾಯ ಮೂಲಗಳಲ್ಲಿ ಎಷ್ಟು ದೊಡ್ಡಮಟ್ಟದ ಭ್ರಷ್ಟಾಚಾರ ಆಗಿರಬಹುದು ಎಂದು ಪ್ರಶ್ನಿಸಿದೆ.

ಇದನ್ನು ಗಂಭೀರ ಅಪರಾಧಿಕ ಉಲ್ಲಂಘನೆ ಎಂದು ಹೇಳಿದ ನ್ಯಾಯಾಲಯವು ಎಫ್‌ಐಆರ್ ದಾಖಲಿಸಿ, ತನಿಖೆ ನಡೆಸಲು ಸೂಚಿಸಿದೆ. ಒಂದು ತಿಂಗಳೊಳಗೆ ಪ್ರಗತಿ ವರದಿ ಸಲ್ಲಿಸುವಂತೆಯೂ ಆದೇಶಿಸಿದೆ. ತನಿಖೆಯ ಅಂತಿಮ ವರದಿ ಸಲ್ಲಿಸುವ ಮೊದಲು ನ್ಯಾಯಾಲಯದ ಅನುಮತಿ ಪಡೆಯಬೇಕು ಎಂಬ ಷರತ್ತನ್ನೂ ವಿಧಿಸಿದೆ.

RELATED ARTICLES
- Advertisment -
Google search engine

Most Popular