Monday, May 19, 2025
Google search engine

Homeಸಿನಿಮಾಜ.17ಕ್ಕೆ ‘ಸಂಜು ವೆಡ್ಸ್‌ ಗೀತಾ-2’ ತೆರೆಗೆ

ಜ.17ಕ್ಕೆ ‘ಸಂಜು ವೆಡ್ಸ್‌ ಗೀತಾ-2’ ತೆರೆಗೆ

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ “ಸಂಜು ವೆಡ್ಸ್‌ ಗೀತಾ-2′ ಚಿತ್ರ ಕಳೆದ ವಾರ (ಜ.10ಕ್ಕೆ) ತೆರೆಕಾಣಬೇಕಿತ್ತು. ಚಿತ್ರತಂಡ ಕೂಡಾ ಎಲ್ಲಾ ತಯಾರಿ ನಡೆಸಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಎದುರಾದ ತೊಂದರೆಯಿಂದ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಯಿತು.

ಈಗ ಸಮಸ್ಯೆ ಬಗೆಹರಿದು, ಸಿನಿಮಾ ಮತ್ತೆ ಬಿಡುಗಡೆಗೆ ಸಿದ್ಧವಾಗಿದೆ. ಇದೇ ವಾರ (ಜ.17)ಕ್ಕೆ ಚಿತ್ರ ತೆರೆಕಾಣುತ್ತಿದೆ. ಇತ್ತೀಚೆಗೆ ಈ ಕುರಿತಾದ ಮಾಹಿತಿಯನ್ನು ಚಿತ್ರತಂಡ ಮಾಧ್ಯಮ ಮುಂದೆ ಹಂಚಿಕೊಂಡಿತು.

ಅಷ್ಟಕ್ಕೂ ಆಗಿದ್ದೇನು?: “ಸಂಜು ವೆಡ್ಸ್‌ ಗೀತಾ-2′ ಚಿತ್ರಕ್ಕೆ ಹೈದರಾಬಾದ್‌ ಕೋರ್ಟ್‌ನಿಂದ ತಡೆ ಬಂದಿತ್ತು. ಅದಕ್ಕೆ ಕಾರಣ ನಾಗಶೇಖರ್‌ ಅವರ ಹಿಂದಿನ ಸಿನಿಮಾವೊಂದರ ಘಟನೆ. ಈ ಕುರಿತು ಮಾತನಾಡುವ ನಾಗಶೇಖರ್‌, “ನಾನು ತೆಲುಗಿನಲ್ಲಿ ಗೆಳೆಯ ಭಾವನಾ ರವಿ ಜೊತೆ ಸೇರಿ “ಗುರ್ತುಂದಾ ಸೀತಾಕಾಲಂ’ ಹೆಸರಿನ ಸಿನಿಮಾ ಮಾಡಿದ್ದೆ. ಆ ಸಿನಿಮಾದ ವೇಳೆ ಒಂದು ವೇಳೆ ಸಿನಿಮಾ ಸೋತರೆ ಮಾನವೀಯತೆಯ ಆಧಾರದಲ್ಲಿ ಇನ್ನೊಂದು ಸಿನಿಮಾವನ್ನು ಉಚಿತವಾಗಿ ಮಾಡಿಕೊಡುತ್ತೇನೆ ಎಂದಿದ್ದೆ. ಆದರೆ, ಆ ಸಿನಿಮಾದ ಫೈನಾನ್ಷಿಯರ್‌ ರಾಮರಾವ್‌ ಎನ್ನುವವರು ಸಂಜು ವೆಡ್ಸ್‌ ಗೀತಾ-2 ಚಿತ್ರದ ನಿರ್ಮಾಪಕ ನಾನೇ ಎಂದು ಕೋರ್ಟ್‌ನಲ್ಲಿ ಕೇಸ್‌ ಹಾಕಿ ಸ್ಟೇ ತಂದಿದ್ದರು. ಹಳೆಯ ವಿಡಿಯೋ ನೋಡಿ, ಅವರು ಇದು ನನ್ನ ಸಿನಿಮಾ ಅಂದುಕೊಂಡಿದ್ದರು ಹಾಗಾಗಿ ಸ್ಟೇ ತಂದಿದ್ದರು. ಕೂಡಲೇ ನಿರ್ಮಾಪಕರು ಅಲ್ಲಿಗೆ ಹೋಗಿ ನಾಲ್ಕು ಕೋಟಿ ಶೂರಿಟಿ ಕೊಟ್ಟು ಸಿನಿಮಾದ ತಡೆ ಆಜ್ಞೆ ತೆರವು ಮಾಡಿಸಿ, ನ್ಯಾಯಾಲಯದ ಪ್ರಕ್ರಿಯೆ ಪೂರೈಸಿದ್ದಾರೆ. ಈಗ ಸಿನಿಮಾ ಬಿಡುಗಡೆಯಾಗುತ್ತಿದೆ’ ಎಂದರು.

ಈ ಚಿತ್ರದ ನಿರ್ಮಾಪಕ ಛಲವಾದಿ ಕುಮಾರ್‌ ಮಾತನಾಡಿ, “ಕೆಲವರು ನಾನು ಯಾರಿಗೋ ಆರು ಕೋಟಿ ರೂಪಾಯಿ ಕೊಡಬೇಕೆಂಬ ಕಾರಣಕ್ಕೆ ಸಿನಿಮಾಕ್ಕೆ ತಡೆ ಬಂದಿದೆ ಎಂದೆಲ್ಲಾ ಹೇಳುತ್ತಿದ್ದಾರೆ. ಖಂಡಿತಾ ಸುಳ್ಳು. ಇದು ನಾಗಶೇಖರ್‌ ಅವರ ಹಿಂದಿನ ಸಿನಿಮಾದ ಕುರಿತಾದ ಸಮಸ್ಯೆಯಿಂದ ಆಗಿದ್ದು. ನನ್ನ ಸೈಟ್‌ ಪತ್ರಗಳನ್ನು ಕೋರ್ಟ್‌ನಲ್ಲಿ ಶೂರಿಟಿ ಇಟ್ಟು ತಡೆಯಾಜ್ಞೆ ತೆರವುಗೊಳಿಸಿದ್ದೇನೆ. ತಡೆ ತರುವ ಮೂಲಕ ಯಾರೂ ಕೂಡಾ ನನಗೆ ನೋಟಿಸ್‌ ನೀಡಿಲ್ಲ. ಏಕಾಏಕಿ ಈ ತರಹ ಮಾಡಿರುವುದು ತುಂಬಾ ಬೇಸರ ತಂದಿದೆ’ ಎಂದರು.

ಶ್ರೀನಗರ ಕಿಟ್ಟಿ ನಾಯಕರಾಗಿರುವ ಈ ಚಿತ್ರಕ್ಕೆ ರಚಿತಾ ರಾಮ್‌ ನಾಯಕಿ. ಚಿತ್ರ ಈ ವಾರ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

RELATED ARTICLES
- Advertisment -
Google search engine

Most Popular