ಹುಣಸೂರು : ತಾಲೂಕಿನ ಬಿಳಿಕೆರೆಯಲ್ಲಿ ಉಪ ಅಗ್ನಿಶಾಮಕ ಠಾಣೆ ತೆರೆಯಲು ಆದಷ್ಟು ಶೀಘ್ರವಾಗಿ ಜಾಗ ಗುರುತಿಸಿ ಕೊಡಬೇಕೆಂದು ಕಂದಾಯ ಅಧಿಕಾರಿಗಳಲ್ಲಿ ಸತ್ಯಪ್ಪ ಮನವಿ ಮಾಡಿದ್ದು, ಈ ಬಗ್ಗೆ ಸತ್ಯ ಎಂಎಎಸ್ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ಮಾತನಾಡಿ, ಈಗಾಗಲೇ ಸರ್ಕಾರವು ಹುಣಸೂರು ತಾಲೂಕು ಬಿಳಿಕೆರೆ ಗ್ರಾಮದಲ್ಲಿ ಒಂದು ಉಪಅಗ್ನಿಶಾಮಕ ಠಾಣೆ ತೆರೆಯಬೇಕೆಂದು ಆದೇಶ ಮಾಡಿದ್ದು,
ಈ ಆದೇಶದ ಅನ್ವಯ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿಗಳು, ಮೈಸೂರು ವಿಭಾಗದವರು, ಮೈಸೂರಿನ ಸರಸ್ವತಿಪುರಂ ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳು ಹಾಗೂ ಹುಣಸೂರಿನ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿಗಳು ಹುಣಸೂರಿನ ಮಾನ್ಯ ತಹಸೀಲ್ದಾರ್ ಅವರಲ್ಲಿ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ 0-30ಗುಂಟೆ ಅಥವಾ 1-00 ಎಕರೆ ಸರ್ಕಾರಿ ಜಾಗವನ್ನು ಗುರುತಿಸಿ ಕೊಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಈ ವೇಳೆ ಹುಣಸೂರು ತಾಲೂಕಿನಲ್ಲಿ ಮತ್ತೊಂದು ಅಗ್ನಿಶಾಮಕ ಠಾಣೆಯ ಅತ್ಯಾವಶ್ಯಕವಾಗಿದೆ. ಏಕೆಂದರೆ ಹುಣಸೂರು ಅತಿ ಹೆಚ್ಚು ತಂಬಾಕು ಬೆಳೆಯುವ ಪ್ರದೇಶವಾಗಿದ್ದು ತಂಬಾಕು ಬ್ಯಾರೆನ್ ಗಳ ಸುರಕ್ಷತಾ ದೃಷ್ಟಿಯಿಂದ ಹಾಗೂ ಇನ್ನಿತರೆ ಯಾವುದೇ ಅಗ್ನಿ ಅವಘಡಗಳ ಬಗ್ಗೆ ತಕ್ಷಣವೇ ಅಗ್ನಿಶಾಮಕವು ಕಾರ್ಯೋನ್ಮುಖವಾಗುವುದರಿಂದ ಇದರ ಅನುಕೂಲತೆಗಳು ಹೆಚ್ಚಾಗಲಿದೆ ಎಂದಿದ್ದಾರೆ.
ಉದ್ದೇಶಿತ ಉಪ ಅಗ್ನಿಶಾಮಕ ಠಾಣೆಯ ಜಾಗ ಗುರುತಿಸುವಿಕೆ ವಿಳಂಬವಾದರೆ ಸದರಿ ಅಗ್ನಿಶಾಮಕ ಠಾಣೆಯನ್ನು ಬೇರೆ ತಾಲೂಕಿಗೆ ವರ್ಗಾಯಿಸುವ ಸಾಧ್ಯತೆ ಇದ್ದು, ಆದ್ದರಿಂದ ಮಾನ್ಯ ಕಂದಾಯ ಅಧಿಕಾರಿಗಳು ಆದಷ್ಟು ಶೀಘ್ರವಾಗಿ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಒಂದು ಎಕರೆ ಜಾಗವನ್ನು ಗುರುತಿಸಿಕೊಟ್ಟು ಹುಣಸೂರಿನ ಬಿಳಿಕೆರೆ ಗ್ರಾಮದಲ್ಲಿ ಉಪ ಅಗ್ನಿಶಾಮಕ ಠಾಣೆ ನಿರ್ಮಿಸಲು ಸಹಕರಿಸುವಂತೆ ಸತ್ಯಪ್ಪ ಈ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.



