ನಾಗ್ಪುರ (ಮಹಾರಾಷ್ಟ್ರ): ಐ ಲವ್ ಯೂ ಎಂದು ಹೇಳುವುದು ಒಬ್ಬ ವ್ಯಕ್ತಿಯ ಭಾವನಾತ್ಮಕ ಅಭಿವ್ಯಕ್ತಿ ಆಗಿದ್ದು, ಅದನ್ನು ಲೈಂಗಿಕ ದೌರ್ಜನ್ಯಕ್ಕೆ ಸಮಾನವಾಗಿ ಪರಿಗಣಿಸಲಾಗದು ಎಂದು ಬಾಂಬೆ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.
2015ರಲ್ಲಿ 35 ವರ್ಷದ ವ್ಯಕ್ತಿ, 17 ವರ್ಷದ ಅಪ್ರಾಪ್ತ ಬಾಲಕಿಗೆ ‘ಐ ಲವ್ ಯೂ’ ಎಂದು ಹೇಳಿ, ಆಕೆಯ ಕೈ ಹಿಡಿದಿದ್ದರು. ಈ ಆರೋಪದಡಿ, 2017ರಲ್ಲಿ ನಾಗ್ಪುರ ಸೆಷನ್ಸ್ ಕೋರ್ಟ್ ಆತನಿಗೆ ಮೂರು ವರ್ಷದ ಜೈಲು ಶಿಕ್ಷೆ ವಿಧಿಸಿತ್ತು. ಆದರೆ ಈ ತೀರ್ಪಿಗೆ ವಿರೋಧವಾಗಿ ಆರೋಪಿಯು ಬಾಂಬೆ ಹೈಕೋರ್ಟ್ನ ನಾಗ್ಪುರ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದ.
ವಿಚಾರಣೆ ನಡೆಸಿದ ನ್ಯಾಯಮೂರ್ತಿ ಊರ್ಮಿಳಾ ಜೋಶಿ-ಫಾಲ್ಕೆ ನೇತೃತ್ವದ ಪೀಠವು, ಆತನ ವರ್ತನೆ ಲೈಂಗಿಕ ದೌರ್ಜನ್ಯಕ್ಕೆ ಸರಿಯಲ್ಲ ಎಂದು ಪರಿಗಣಿಸಿ, ಸೆಷನ್ಸ್ ಕೋರ್ಟ್ ತೀರ್ಪನ್ನು ರದ್ದುಪಡಿಸಿ ಆರೋಪಿಯನ್ನು ಖುಲಾಸೆಗೊಳಿಸಿದೆ.
ತೀರ್ಪಿನಲ್ಲಿ ಅವರು ಲೈಂಗಿಕ ಕಿರುಕುಳದ ಅರ್ಥವನ್ನು ವಿವರಿಸಿ, “ಅನುಚಿತ ಸ್ಪರ್ಶ, ಬಲವಂತದ ವರ್ತನೆ, ಅಶ್ಲೀಲ ಅಥವಾ ಅಸಭ್ಯ ಚಟುವಟಿಕೆಗಳು ಮಾತ್ರ ಕಾನೂನುಬದ್ಧ ದಂಡನೀಯ ಕೃತ್ಯಗಳಾಗಿವೆ” ಎಂದು ಹೇಳಿದ್ದಾರೆ. ಈ ಪ್ರಕರಣದಲ್ಲಿ ಇಂಥ ಅಂಶಗಳಿಲ್ಲ ಎಂಬುದನ್ನು ತೀರ್ಪು ಸ್ಪಷ್ಟಪಡಿಸಿದೆ.