Friday, August 29, 2025
Google search engine

Homeಸ್ಥಳೀಯಡ್ರೋನ್‌ ಶೋ ಪ್ರಾಯೋಗಿಕ ಪ್ರದರ್ಶನಕ್ಕೆ ಸೆ.28 ಮತ್ತು 29ರಂದು ವೇಳಾಪಟ್ಟಿ – ಜಿಲ್ಲಾಧಿಕಾರಿ ಸೂಚನೆ

ಡ್ರೋನ್‌ ಶೋ ಪ್ರಾಯೋಗಿಕ ಪ್ರದರ್ಶನಕ್ಕೆ ಸೆ.28 ಮತ್ತು 29ರಂದು ವೇಳಾಪಟ್ಟಿ – ಜಿಲ್ಲಾಧಿಕಾರಿ ಸೂಚನೆ

ಸೆಸ್ಕ್‌ ಅಧಿಕಾರಿಗಳೊಂದಿಗೆ ಪೂರ್ವಭಾವಿ ಪ್ರಗತಿ ಪರಿಶೀಲನಾ ಸಭೆ

ಮೈಸೂರು, ಆಗಸ್ಟ್‌ 29, 2025: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಡ್ರೋನ್‌ ಶೋ ಪ್ರಾಯೋಗಿಕ ಪ್ರದರ್ಶನವನ್ನು ಸೆ.28 ಮತ್ತು 29ರಂದು ನಡೆಸಲು ಸಮಯ ನಿಗದಿಪಡಿಸಿದ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಅವರು, ದಸರಾ ವಿದ್ಯುತ್‌ ದೀಪಾಲಂಕಾರ ಹಾಗೂ ಡ್ರೋನ್‌ ಶೋ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ(ಸೆಸ್ಕ್‌)ದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ದಸರಾ ಮಹೋತ್ಸವದ ವಿದ್ಯುತ್‌ ದೀಪಾಲಂಕಾರಕ್ಕೆ ಸಂಬಂಧಿಸಿದಂತೆ ವಿಜಯನಗರ 2ನೇ ಹಂತದಲ್ಲಿರುವ ನಿಗಮದ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

“ನಗರದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಈ ಬಾರಿ ಏರ್‌ ಶೋ ಸಹ ನಡೆಯಲಿದೆ. ಇದರ ನಡುವೆ ಡ್ರೋನ್‌ ಶೋ ನಡೆಸಬೇಕಿದೆ. ಅಲ್ಲದೆ, ಪಂಜಿನ ಕವಾಯತು ಕಾರ್ಯಕ್ರಮದ ತಾಲೀಮು ಸಹ ನಡೆಯುವ ಹಿನ್ನೆಲೆಯಲ್ಲಿ ಯಾವುದೇ ಅಡಚಣೆ ಆಗದಂತೆ ಮೂರು ಕಾರ್ಯಕ್ರಮಗಳನ್ನು ನಡೆಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸೆ.27 ಮತ್ತು 28ರಂದು ಡ್ರೋನ್‌ ಶೋ ಪ್ರಾಯೋಗಿಕ ಪ್ರದರ್ಶನ ನಡೆಸುವುದು ಸೂಕ್ತವಾದ ದಿನಾಂಕವಾಗಿದೆ” ಎಂದರು.

“ಡ್ರೋನ್‌ ಶೋ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಅಗತ್ಯವಿರುವ ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯನ್ನು ಎಂಡಿಎ ವತಿಯಿಂದ ಮಾಡಿಕೊಳ್ಳಬೇಕಿದೆ. ಇದರೊಂದಿಗೆ ಸಂಗೀತ ಸಂಜೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಎಂಡಿಎ ವತಿಯಿಂದ ನಡೆಸಲು ಕ್ರಮವಹಿಸಬೇಕಿದೆ” ಎಂದು ತಿಳಿಸಿದರು.

ಸಭೆಯ ಆರಂಭದಲ್ಲಿ ಮಾತನಾಡಿದ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎಂ. ಮುನಿಗೋಪಾಲ್‌ ರಾಜು ಅವರು, ದಸರಾ ಮಹೋತ್ಸವದ ಅಂಗವಾಗಿ ನಗರದ ಪ್ರಮುಖ ವೃತ್ತ, ರಸ್ತೆಗಳು ಹಾಗೂ ಇನ್ನಿತರ ಸ್ಥಳಗಳಲ್ಲಿ ಮಾಡಲಾಗುವ ದಸರಾ ದೀಪಾಲಂಕಾರದ ವಿನ್ಯಾಸ, ವಿವಿಧ ಬಗೆಯ ಕಲಾಕೃತಿಗಳನ್ನು ನಿರ್ಮಿಸಿರುವ ಕುರಿತಂತೆ ಮಾಹಿತಿ ನೀಡಿದರು.

“ಸೆ.28 ಮತ್ತು 29ರಂದು ನಡೆಯುವ ಡ್ರೋನ್‌ ಶೋ ಪ್ರಾಯೋಗಿಕ ಪ್ರದರ್ಶನ ಹಾಗೂ ಅ.1 ಮತ್ತು 2ರಂದು ಡ್ರೋನ್‌ ಶೋ ಪ್ರಮುಖ ಪ್ರದರ್ಶನ ನಡೆಯಲಿದೆ. ಡ್ರೋನ್‌ ಶೋ ಜತೆಗೆ ಖ್ಯಾತ ಗಾಯಕರಿಂದ ಸಂಗೀತ ಸಂಜೆ ನಡೆಸಲು ಚಿಂತನೆ ನಡೆಸಲಾಗಿದೆ” ಎಂದು ತಿಳಿಸಿದರು.

ಸಭೆಯಲ್ಲಿ ಎಂಡಿಎ ಆಯುಕ್ತ ರಕ್ಷಿತ್‌, ನಿಗಮದ ತಾಂತ್ರಿಕ ನಿರ್ದೇಶಕ ಡಿ.ಜೆ. ದಿವಾಕರ್‌, ಮೈಸೂರು ವೃತ್ತದ ಅಧೀಕ್ಷಕ ಇಂಜಿನಿಯರ್‌ ಸುನೀಲ್‌, ಪ್ರಧಾನ ವ್ಯವಸ್ಥಾಪಕ ಎಲ್‌. ಲೋಕೇಶ್‌ ಸೇರಿದಂತೆ ಪ್ರಮುಖ ಅಧಿಕಾರಿಗಳು ಇದ್ದರು.

RELATED ARTICLES
- Advertisment -
Google search engine

Most Popular