ಬೆಂಗಳೂರು: ಇಂದಿನಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-೧ ಆರಂಭವಾಗಲಿದೆ. ರಾಜ್ಯಾದ್ಯಂತ ಈ ಬಾರಿ ೧,೧೨೪ ಕೇಂದ್ರಗಳಲ್ಲಿ ೬.೯೮ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.ಮಾರ್ಚ್ ೧ರಂದು ಆರಂಭ ಆಗುವ ಈ ಪರೀಕ್ಷೆ ಮಾ.೨೨ ರ ವರೆಗೆ ನಡೆಯಲಿದೆ. ಬೆಳಗ್ಗೆ ೧೦:೧೫ ರಿಂದ ಮಧ್ಯಾಹ್ನ ೧:೩೦ ರ ವರೆಗೆ ಪರೀಕ್ಷೆಗಳು ನಡೆಯಲಿವೆ. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಯಾವುದೇ ಪರೀಕ್ಷಾ ಅಕ್ರಮಗಳು ನಡೆಯದಂತೆ ನೋಡಿಕೊಳ್ಳಲು ಕ್ರಮ ವಹಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಲಿನ ೨೦೦ ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ಬೆಳಗ್ಗೆ ೯:೩೦ ರಿಂದ ಮಧ್ಯಾಹ್ನ ೨ ರ ವರೆಗೆ ಜೆರಾಕ್ಸ್ ಅಂಗಡಿಗಳು ಬಂದ್ ಆಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಕೆಎಸ್‌ಆರ್‌ಟಿಸಿ ಪರೀಕ್ಷಾ ಕೇಂದ್ರಕ್ಕೆ ತೆರಳಲು ಹಾಗೂ ಮನೆಗೆ ಹಿಂದಿರುಗಲು ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಿದೆ. ವಿದ್ಯಾರ್ಥಿಗಳು ತಮ್ಮ ಹಾಲ್ ಟಿಕೆಟ್ ತೋರಿಸಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಬಹುದು.