ಕಮ್ಯುನಿಸ್ಟ್ ಚಳುವಳಿಯ ಹಿರಿಯ ನೇತಾರರೂ,CPIM ಪಕ್ಷದ ಮಾಜಿ ಜಿಲ್ಲಾ ಸಮಿತಿ ಸದಸ್ಯರಾಗಿದ್ದ ಕಾಂ.ಸಂಜೀವ ಬಂಗೇರ (87ವರ್ಷ) ರವರು ನಿನ್ನೆ ತಡರಾತ್ರಿ ನಿಧನರಾದರು.
ಯೌವ್ವನದಲ್ಲಿ ಬಂಟ್ವಾಳ ಪೇಟೆಯಲ್ಲಿ ಕ್ಷೌರಿಕ ವೃತ್ತಿಯನ್ನು ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ಸಂಜೀವ ಬಂಗೇರರವರಿಗೆ ಬಡವರ ಕಾರ್ಮಿಕರ ಶೋಷಿತ ಜನತೆಯ ಬಗ್ಗೆ ಅಪಾರವಾದ ಕಾಳಜಿ.ಈ ಕಾರಣದಿಂದಲೇ ಸಂಜೀವ ಬಂಗೇರರವರಿಗೆ ತನ್ನೆದುರು ಬೀಡಿ ಕಾರ್ಮಿಕರಿಗೆ ಆಗುವಂತಹ ಅನ್ಯಾಯ ಶೋಷಣೆಯನ್ನು ಸಹಿಸಲು ಸಾಧ್ಯವಾಗದೆ ಅವರನ್ನು ಸಂಘಟಿಸಲು ಮುಂದಾದರು.ಆ ಮೂಲಕ ಬೀಡಿ ಕಾರ್ಮಿಕರ ಕಣ್ಮಣಿಯಾಗಿ ಮೆರೆದು ಜಿಲ್ಲೆಯಾದ್ಯಂತ ಬೀಡಿ ಕಾರ್ಮಿಕರನ್ನು ಸಂಘಟಿಸಲು ಮುಂದಾದರು.ಕೆಂಪು ಬಾವುಟದಿಂದ ಮಾತ್ರವೇ ದುಡಿಯುವ ವರ್ಗದ ವಿಮೋಚನೆ ಸಾಧ್ಯವೆಂದು ದೃಢವಾಗಿ ಅರಿತು, ಬಂಟ್ವಾಳ ತಾಲೂಕಿನಾದ್ಯಂತ ಕಮ್ಯುನಿಸ್ಟ್ ಚಳುವಳಿಯ ವಿಸ್ತರಣೆಗೆ ಅವಿರತವಾಗಿ ಶ್ರಮಿಸಿದರು. CPIM ಪಕ್ಷದ ಬಂಟ್ವಾಳ ತಾಲೂಕು ಮುಖಂಡರಾಗಿ,ಜಿಲ್ಲಾ ಸಮಿತಿ ಸದಸ್ಯರಾಗಿ ಅವಿಭಜಿತ ಜಿಲ್ಲೆಯ ಕಮ್ಯುನಿಸ್ಟ್ ಚಳುವಳಿಯ ಬೆಳವಣಿಗೆಗೆ ತನ್ನದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಅಂತಿಮ ಉಸಿರಿನವರೆಗೂ ಕಮ್ಯುನಿಸ್ಟ್ ಪಕ್ಷದ ಬಗ್ಗೆ ಅಪಾರ ಪ್ರೀತಿ,ಮಾರ್ಕ್ಸ್‌ವಾದಿ ಸಿದ್ದಾಂತದ ಬಗ್ಗೆ ದೃಢವಾದ ವಿಶ್ವಾಸವನ್ನು ಹೊಂದಿದ್ದ ಸಂಜೀವ ಬಂಗೇರರವರು ತನ್ನ ಮಕ್ಕಳು ಸೇರಿದಂತೆ ಕುಟುಂಬ ಸದಸ್ಯರ ಮಧ್ಯೆಯೂ ಕಮ್ಯುನಿಸ್ಟ್ ಪಕ್ಷದ ಬಗ್ಗೆ ಗೌರವ ಮೂಡುವಂತೆ ಶ್ರಮಿಸಿದ್ದರು.ಒಟ್ಟಿನಲ್ಲಿ ಕಾಂ.ಸಂಜೀವ ಬಂಗೇರರವರ ಅಗಲುವಿಕೆಯು ಜಿಲ್ಲೆಯ ಕಮ್ಯುನಿಸ್ಟ್ ಚಳುವಳಿಗೆ ಅಪಾರ ನಷ್ಟವುಂಟಾಗಿದೆ ಎಂದು CPIM ತನ್ನ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಿದೆ. ಕಾಂ.ಸಂಜೀವ ಬಂಗೇರರವರು ಪತ್ನಿ,ನಾಲ್ವರು ಗಂಡು,ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಸಂಖ್ಯೆಯ ಬಂಧು ಬಳಗವನ್ನು ಅಗಲಿದ್ದಾರೆ.
ವರದಿ: ಶಂಶೀರ್ ಬುಡೋಳಿ



