ಬೆಂಗಳೂರು: ಪ್ರತ್ಯೇಕ ರಾಷ್ಟ್ರ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಸಂಸದ ಡಿ.ಕೆ.ಸುರೇಶ್ ವಿರುದ್ಧ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಈ ವೇಳೆ ಡಿ.ಕೆ.ಸುರೇಶ್ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕೆಲವರನ್ನು ಪೊಲೀಸರು ವಶಕ್ಕೆ ಪಡೆದರು. ಅರಮನೆ ಮೈದಾನದಿಂದ ಧಿಕ್ಕಾರ ಕೂಗುತ್ತಾ ಡಿ.ಕೆ.ಸುರೇಶ್ ನಿವಾಸದ ಬೀದಿಗೆ ಕಾರ್ಯಕರ್ತರು ನುಗ್ಗಿದರು.
ಡಿ.ಕೆ.ಸುರೇಶ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಏಕಾಏಕಿ ಡಿ.ಕೆ.ಸುರೇಶ್ ನಿವಾಸದ ಕಡೆ ಕೆಲವರು ನುಗ್ಗಲು ಯತ್ನಿಸಿದ್ದು, ಪೊಲೀಸರು ಅಡ್ಡಗಟ್ಟಿದರು.
ಈ ವೇಳೆ ಕಾರ್ಯಕರ್ತರು ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಇತ್ತ ಮತ್ತೊಂದು ಕಾರ್ಯಕರ್ತರ ತಂಡ ಗಾಯತ್ರಿ ವಿಹಾರ ಅರಮನೆ ಮೈದಾನ ಗೇಟ್ ಬಳಿ ಪ್ರತಿಭಟನೆ ನಡೆಸಿತು.
ಡಿಕೆ ಸುರೇಶ್ ವಿರುದ್ಧ ಪ್ರತಿಭಟಿಸಿದ ಬಿಜೆಪಿ ಯುವ ಮುಖಂಡರಾದ ಅನಿಲ್ ಶೆಟ್ಟಿ, ಪ್ರಶಾಂತ್, ಸಂದೀಪ್ ರವಿ, ಪ್ರತಾಪ್ ಸೇರಿ 35 ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದರು.
ವಶಕ್ಕೆ ಪಡೆದ ಕಾರ್ಯಕರ್ತರನ್ನು ಪೊಲೀಸರು ಬಸ್ ನಲ್ಲಿ ಕರೆದೊಯ್ದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಬಳ್ಳಾರಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ಟ್ರಾಫಿಕ್ ದಟ್ಟಣೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.