ಬೆಂಗಳೂರು: ಲೈಂಗಿಕ ಹಗರಣ ಪ್ರಕರಣದ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಂದಿಳಿದಾಗ ಅವರನ್ನು ವಿಮಾನ ನಿಲ್ದಾಣದಿಂದ ಹೊರಗೈಯ್ಯಲು ಪೊಲೀಸ್ ವರಿಷ್ಠಾಧಿಕಾರಿಯೊಬ್ಬರು ಸೇರಿದಂತೆ ಐದು ಮಂದಿ ಮಹಿಳಾ ಪೊಲೀಸ್ ಅಧಿಕಾರಿಗಳನ್ನೇ ನಿಯೋಜಿಸಲಾಗಿದ್ದು ವಿಶೇಷವಾಗಿತ್ತು. ಸರ್ಕಾರ ಈ ಪ್ರಕರಣವನ್ನು ಅದೆಷ್ಟು ಗಂಭೀರವಾಗಿ ಪರಿಗಣಿಸಿದೆ ಎಂಬುದನ್ನು ತೋರ್ಪಡಿಸಲು ಮತ್ತು ಸಂತ್ರಸ್ತೆಯರಲ್ಲಿ ಧೈರ್ಯ ತುಂಬಲು ಈ ಕ್ರಮಕೈಗೊಳ್ಳಲಾಗಿದೆ ಎನ್ನಲಾಗಿದೆ.
ಎಪ್ರಿಲ್ ೨೮ರಂದು ದೇಶಬಿಟ್ಟು ಪಲಾಯನಗೈದಿದ್ದ ಪ್ರಜ್ವಲ್ ಇಂದು ಮುಂಜಾನೆ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಕೂಡಲೇ ಇಮಿಗ್ರೇಶನ್ ಅಧಿಕಾರಿಗಳು ಮತ್ತು ಸಿಐಎಸ್‌ಎಫ್ ಪಡೆಗಳು ಆತನನ್ನು ಬಂಧಿಸಿ ವಿಶೇಷ ತನಿಖಾ ತಂಡಕ್ಕೆ ಒಪ್ಪಿಸಿದೆ.
ಆತನನ್ನು ವೈದ್ಯಕೀಯ ತಪಾಸಣೆಗೆ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ನಂತರ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗುವುದು. ಆಗಲೂ ಆತನನ್ನು ಕರೆದೊಯ್ಯಲು ಮಹಿಳಾ ಪೊಲೀಸ್ ಅಧಿಕಾರಿಗಳನ್ನೇ ನಿಯೋಜಿಸಲಾಗುತ್ತಿದೆ.
ಸಾರ್ವಜನಿಕವಾಗಿ ಪ್ರಜ್ವಲ್ ಎಸ್‌ಐಟಿ ಅಧಿಕಾರಿಗಳ ಜೊತೆ ಸಾಗುವಾಗ ಆತನಿಗೆ ಮುಖ ಮುಚ್ಚಲು ಅವಕಾಶ ನೀಡಲಾಗುವುದಿಲ್ಲ, ಆತನಿಗೆ ಕಸ್ಟಡಿ ವೇಳೆ ಯಾವುದೇ ವಿಶೇಷ ಸವಲತ್ತು ಒದಗಿಸಲಾಗುವುದಿಲ್ಲ ಎಂಬ ಸಂದೇಶ ಈ ಮೂಲಕ ರವಾನಿಸಿ ಸಂತ್ರಸ್ತೆಯರಿಗೆ ಬೆಂಬಲ ಸೂಚಿಸುವ ಕ್ರಮವಾಗಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಂಧನವಾದ ಕೂಡಲೇ ಅರಮನೆ ರಸ್ತೆಯಲ್ಲಿರುವ ಕಾರ್ಲ್‌ಟನ್ ಹೌಸ್‌ನಲ್ಲಿರುವ ಸಿಐಡಿ ಮುಖ್ಯ ಕಾರ್ಯಾಲಯಕ್ಕೆ ಕರೆದೊಯ್ಯಲಾಯಿತು.ತಾನು ಸಂಸದನಾಗಿರುವುದರಿಂದ ಅಲ್ಲಿ ವಿಶೇಷ ಸೆಲ್‌ನಲ್ಲಿ ಇರಿಸಬೇಕೆಂದು ಪ್ರಜ್ವಲ್ ಕೋರಿದ್ದಾರೆನ್ನಲಾಗಿದ್ದು ಆದರೆ ಇದಕ್ಕೆ ಅನುಮತಿ ನಿರಾಕರಿಸಿರುವ ಪೊಲೀಸರು ಯಾವುದೇ ಹೆಚ್ಚುವರಿ ಸವಲತ್ತುಗಳಿರುವ ಸಾಮಾನ್ಯ ಸೆಲ್‌ನಲ್ಲಿರಿಸುವುದಾಗಿ ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ ಆತನಿಗೆ ಯಾವುದೇ ವಿಶೇಷ ಸವಲತ್ತು ನೀಡಲಾಗದು ಎಂಬ ಸಂದೇಶ ರವಾನಿಸಲು ಪೊಲೀಸರು ಆತನನ್ನು ಇನ್ನೋವಾ ಕಾರಿನ ಬದಲು ಬೊಲೆರೋ ವಾಹನಗಳಲಿಯೇ ಸಾಗಿಸಲು ನಿರ್ಧರಿಸಿದ್ದಾರೆ. ಮೂವರು ಮಹಿಳೆಯರ ಮೇಲೆ ಅತ್ಯಾಚಾರಗೈದ ಆರೋಪ ಪ್ರಜ್ವಲ್ ಮೇಲಿದ್ದು ಹಾಗೂ ೭೦ಕ್ಕೂ ಅಧಿಕ ಮಹಿಳೆಯರೊಂದಿಗೆ ಸಂಪರ್ಕದಲ್ಲಿರುವಾಗ ೩೦೦೦ಕ್ಕೂಅಧಿಕ ವೀಡಿಯೋಗಳನ್ನು ಚಿತ್ರೀಕರಿಸಿರುವ ಆರೋಪವಿದೆ.