ವರದಿ :ಸ್ಟೀಫನ್ ಜೇಮ್ಸ್.
ದಾವಣಗೆರೆ: ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ವೀರಶೈವ ಲಿಂಗಾಯತ ಸಂಪ್ರದಾಯದ ಪ್ರಕಾರ ನಗರದ ಆನೆಕೊಂಡದ ಕಲ್ಲೇಶ್ವರ ರೈಸ್ ಮಿಲ್ ಆವರಣದಲ್ಲಿ ಸೋಮವಾರ ಸಂಜೆ 6ಕ್ಕೆ ನೆರವೇರಿತು.
ಶಿವಶಂಕರಪ್ಪ ಅವರ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಕಲ್ಲೇಶ್ವರ ಮಿಲ್ ಆವರಣಕ್ಕೆ ತರಲಾಯಿತು. ನಗರದ ಎಂಸಿಸಿ ಬಡಾವಣೆಯ ಅವರ ನಿವಾಸದಿಂದ ಮಧ್ಯಾಹ್ನ 12.20ಕ್ಕೆ ಹೊರಟ ಪಾರ್ಥಿವ ಶರೀರದ ಅಂತಿಮ ಯಾತ್ರೆ 1.30ಕ್ಕೆ ಹೈಸ್ಕೂಲ್ ಮೈದಾನ ತಲುಪಿತು. ಅಲ್ಲಿಂದ ಮಧ್ಯಾಹ್ನ 2.45ಕ್ಕೆ ಆರಂಭವಾದ ಅಂತಿಮ ಯಾತ್ರೆ ನಗರದ ವಿವಿಧ ಭಾಗಗಳಲ್ಲಿ ಸಾಗಿ ಸಂಜೆ 4.30ಕ್ಕೆ ಕಲ್ಲೇಶ್ವರ ಮಿಲ್ ಆವರಣ ತಲುಪಿತು.

ಪಾರ್ಥಿವ ಶರೀರವನ್ನು ಮಿಲ್ ಆವರಣಕ್ಕೆ ತರುತ್ತಿದ್ದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಮಿಸಿದರು. ಕೈವಲ್ಯದಲ್ಲೇ ಇದ್ದ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಪೊಲೀಸರು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಸರ್ಕಾರಿ ಗೌರವ ಸಲ್ಲಿಸಿದರು. ಆ ಬಳಿಕ ಅಂತ್ಯಕ್ರಿಯೆ ಪ್ರಕ್ರಿಯೆ ಅಂತಿಮ ಹಂತ ತಲುಪಿತು. ಈ ಸಂದರ್ಭದಲ್ಲಿ ಐಕ್ಯ ಮಂಟಪದ ಸಮೀಪ ಎಲ್ಲರಿಗೂ ವಿಭೂತಿ ನೀಡಲಾಯಿತು. ಈ ವೇಳೆ ನೂಕಾಟ, ತಳ್ಳಾಟವೂ ಉಂಟಾಯಿತು.

ಶಿವಶಂಕರಪ್ಪ ಅವರ ಪತ್ನಿ ಪಾರ್ವತಮ್ಮ ಅವರ ಸಮಾಧಿಯ ಪಕ್ಕದಲ್ಲೇ 9×5 ಅಡಿ ಸುತ್ತಳತೆಯ ಕುಣಿಯಲ್ಲಿ ದೀಪಗಳನ್ನು ಇಡಲು ಮೆಟ್ಟಿಲು ನಿರ್ಮಾಣ ಮಾಡಲಾಗಿತ್ತು. ವಿವಿಧ ಮಠಾಧೀಶರ ಸಮ್ಮುಖದಲ್ಲಿ ಅಂತಿಮ ವಿಧಿ ವಿಧಾನಗಳು ನೆರವೇರಿದವು.
ಶಿವಶಂಕರಪ್ಪ ಅವರ ಪಾರ್ಥಿವ ಶರೀರವನ್ನು ಕುಣಿಯಲ್ಲಿ ಯೋಗ ಭಂಗಿಯಲ್ಲಿ ಕೂರಿಸಲಾಯಿತು. ಜೊತೆಗೆ 500ಕ್ಕೂ ಹೆಚ್ಚು ವಿಭೂತಿಗಳನ್ನು ಇಡಲಾಯಿತು. ಪುತ್ರರಾದ ಎಸ್.ಎಸ್. ಬಕ್ಕೇಶ್, ಎಸ್.ಎಸ್. ಗಣೇಶ್ ಹಾಗೂ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಅಂತಿಮ ವಿಧಿವಿಧಾನ ಪೂರೈಸಿದರು.
ಸಿರಿಗೆರೆ ಮಠದ ಶಿವಮೂರ್ತಿ ಶಿವಚಾರ್ಯ ಸ್ವಾಮೀಜಿ, ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ, ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ, ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಚಾರ್ಯ ಸ್ವಾಮೀಜಿ, ಪಂಚಮಸಾಲಿ ಗುರುಪೀಠದ ವಚನಾಂದ ಸ್ವಾಮೀಜಿ ಸೇರಿದಂತೆ ಅನೇಕ ಮಠಧೀಶರು ಭಾಗಿಯಾಗಿದ್ದರು.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ, ಸಹಕಾರ ಸಚಿವ ಶಿವಾನಂದ ಪಾಟೀಲ, ಸಾಂಖ್ಯಿಕ ಸಚಿವ ಡಿ. ಸುಧಾಕರ್, ವಸತಿ ಸಚಿವ ಜಮೀರ್ ಅಹಮ್ಮದ್, ಅರಣ್ಯ ಸಚಿವ ಈಶ್ವರ್ ಖಂಡ್ರೆ, ವಿಧಾನಪರಿಷತ್ ಸಭಾಧ್ಯಕ್ಷ ಬಸವರಾಜ ಹೊರಟ್ಟಿ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ, ಬೋಸರಾಜ್, ವಿಧಾನಪರಿಷತ್ ಸದಸ್ಯರಾದ ಸಿ.ಟಿ.ರವಿ, ಉಮಾಶ್ರೀ, ಶಾಸಕರಾದ ಟಿ.ರಘುಮೂರ್ತಿ, ವಿಜಯಾನಂದ ಕಾಶಪ್ಪನವರ್, ಡಿ.ಜಿ.ಶಾಂತನಗೌಡ, ಕೆ.ಎಸ್.ಬಸವಂತಪ್ಪ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.



