Wednesday, July 15, 2026
Google search engine

Homeರಾಜ್ಯಮಹಿಳಾ ಮೀಸಲಾತಿ, ಕ್ಷೇತ್ರ ಪುನರ್ ವಿಂಗಡಣೆ ಮಸೂದೆಗೆ ಶರದ್ ಪವಾರ್ ಬಣ ಬೆಂಬಲ !

ಮಹಿಳಾ ಮೀಸಲಾತಿ, ಕ್ಷೇತ್ರ ಪುನರ್ ವಿಂಗಡಣೆ ಮಸೂದೆಗೆ ಶರದ್ ಪವಾರ್ ಬಣ ಬೆಂಬಲ !

ಮುಂಬೈ : ಮುಂಬರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆ ಹಾಗೂ ಕ್ಷೇತ್ರ ಪುನರ್ ವಿಂಗಡಣೆ (Delimitation) ಮಸೂದೆಗೆ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಬಣ ಬೆಂಬಲ ನೀಡುವ ಸಾಧ್ಯತೆ ಇದೆ. ಆದರೆ, ಈ ಬೆಂಬಲವು ಎನ್‌ಡಿಎ ಮೈತ್ರಿಕೂಟ ಸೇರುವ ನಿರ್ಧಾರವಾಗಿರದೆ, ವಿಷಯ ಆಧಾರಿತ ಸಹಕಾರಕ್ಕೆ ಮಾತ್ರ ಸೀಮಿತವಾಗಿರಲಿದೆ ಎಂದು ಮೂಲಗಳು ತಿಳಿಸಿವೆ.

ಸದ್ಯ 9 ಸಂಸದರನ್ನು ಹೊಂದಿರುವ ಶರದ್ ಪವಾರ್ ಬಣವು ಎನ್‌ಡಿಎ ಭಾಗವಾಗುವ ಯಾವುದೇ ಉದ್ದೇಶ ಹೊಂದಿಲ್ಲ ಎನ್ನಲಾಗುತ್ತಿದ್ದು, 2023ರಲ್ಲಿ ಅಜಿತ್ ಪವಾರ್ ಬಂಡಾಯ ಎದ್ದು ಮಹಾಯುತಿ ಸರ್ಕಾರದೊಂದಿಗೆ ಕೈಜೋಡಿಸಿದ ಬಳಿಕ ಎನ್‌ಸಿಪಿ ಎರಡು ಬಣಗಳಾಗಿ ವಿಭಜನೆಯಾಗಿತ್ತು.

ಇದೀಗ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳನ್ನು ನಿಯಂತ್ರಿಸುವ ಹಾಗೂ ಮತ್ತಷ್ಟು ವಿಭಜನೆ ತಪ್ಪಿಸುವ ಉದ್ದೇಶದಿಂದ, ಪ್ರಮುಖ ಮಸೂದೆಗಳಿಗೆ ಮಾತ್ರ ಬೆಂಬಲ ನೀಡುವ ತಂತ್ರವನ್ನು ಶರದ್ ಪವಾರ್ ಅನುಸರಿಸುತ್ತಿದ್ದಾರೆ ಎನ್ನಲಾಗಿದೆ.

ಇದರ ನಡುವೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ನಿವಾಸದಲ್ಲಿ ನಡೆದ ಸರಣಿ ಸಭೆಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ. ಮೊದಲು ಅಜಿತ್ ಪವಾರ್ ಬಣದ ನಾಯಕರುಗಳಾದ ಪ್ರಫುಲ್ ಪಟೇಲ್ ಮತ್ತು ಸುನಿಲ್ ತಟ್ಕರೆ ಅವರು ಫಡ್ನವೀಸ್ ಅವರನ್ನು ಭೇಟಿ ಮಾಡಿದ್ದು, ಬಳಿಕ ಶರದ್ ಪವಾರ್ ಬಣದ ಹಿರಿಯ ನಾಯಕ ಜಯಂತ್ ಪಾಟೀಲ್ ಕೂಡ ಮುಖ್ಯಮಂತ್ರಿಗಳ ನಿವಾಸಕ್ಕೆ ಆಗಮಿಸಿ ಮಾತುಕತೆ ನಡೆಸಿದ್ದಾರೆ.

ಈ ಸಭೆಗಳ ಉದ್ದೇಶದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲವಾದರೂ, ಎನ್‌ಸಿಪಿಯ ಎರಡೂ ಬಣಗಳ ನಡುವೆ ಹೊಸ ರಾಜಕೀಯ ಸಮೀಕರಣ ರೂಪುಗೊಳ್ಳುತ್ತಿದೆಯೇ ಎಂಬ ಚರ್ಚೆಗಳು ಆರಂಭವಾಗಿದ್ದು ಇದೇ ವೇಳೆ, ಕ್ಷೇತ್ರ ಪುನರ್ ವಿಂಗಡಣೆ ಕುರಿತು ಪ್ರತಿಕ್ರಿಯಿಸಿರುವ ಸುಪ್ರಿಯಾ ಸುಳೆ, ಈ ಪ್ರಕ್ರಿಯೆಯಿಂದ ಮಹಾರಾಷ್ಟ್ರ ಹಾಗೂ ದಕ್ಷಿಣ ಭಾರತದ ರಾಜ್ಯಗಳ ಸಂಸದೀಯ ಪ್ರಾತಿನಿಧ್ಯಕ್ಕೆ ಯಾವುದೇ ಧಕ್ಕೆಯಾಗದ ರೀತಿಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಜುಲೈ 20ರಿಂದ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸುವ ಪ್ರಸ್ತಾವನೆ ಒಳಗೊಂಡ ಸಂವಿಧಾನ ತಿದ್ದುಪಡಿ ಮಸೂದೆ ಮಂಡನೆಯಾಗುವ ಸಾಧ್ಯತೆ ಇದೆ.

RELATED ARTICLES
- Advertisment -
Google search engine

Most Popular