ಗುಂಡ್ಲುಪೇಟೆ: ಜ್ಞಾನ ಹಂಚುವುದರಿಂದ ಸಮಾಜದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಸುಭಾಷ್ ಮಾಡ್ರಹಳ್ಳಿ ಹೇಳಿದರು.
ಪಟ್ಟಣದಲ್ಲಿ ಚಿಜಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆದ ಚಿಜಲ್ ಗ್ರೂಪ್ ಆಫ್ ಇನ್‍ಸ್ಟಿಟ್ಯೂಷನ್‍ನ ನೂತನ ನರ್ಸಿಂಗ್ ಕಾಲೇಜು ಮತ್ತು ಕಚೇರಿ ಪ್ರಾರಂಭೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಚಿಜಲ್ ಟ್ರಸ್ಟ್ ಶೈಕ್ಷಣಿಕ ಸೇವೆಯನ್ನು ಒದಗಿಸುವ ಜೊತೆಗೆ ಔದ್ಯೋಗಿಕ ಅವಕಾಶಗಳನ್ನು ಕಲ್ಪಿಸಿಕೊಡುತ್ತಿರುವುದು ಎಲ್ಲರು ಮೆಚ್ಚುವಂತ ಕೆಲಸ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಮೊದಲ ಧ್ಯೇಯ ವಾಕ್ಯವೇ ಶಿಕ್ಷಿತರಾಗಿ ಎಂಬುದಾಗಿದೆ. ಆ ಹಾದಿಯಲ್ಲಿ ಚಿಜಲ್ ಸಂಸ್ಥೆ ಕಳೆದ ಹನ್ನೆರಡು ವರ್ಷಗಳಿಂದ ಪರಿಶ್ರಮದಿಂದ ಬೆಳೆದಿದೆ. ಇಂದು ಇಲ್ಲಿನ ಸಾವಿರಾರು ವಿದ್ಯಾರ್ಥಿಗಳು ದೇಶದಾದ್ಯಂತ ಆರೋಗ್ಯ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೇ ಸಾಮಾಜಿಕ ಮತ್ತು ಸಾಂಸ್ಕೃತಿಕ ಜಾಗೃತಿ ಮೂಡಿಸುವ ಹತ್ತು ಹಲವು ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಜಿಲ್ಲೆಯಲ್ಲಿ ಮೊದಲ ಸ್ಥಾನ ಪಡೆದಿದೆ ಎಂದು ತಿಳಿಸಿದರು.
ಬುದ್ದ, ಬಸವ, ಅಂಬೇಡ್ಕರ್ ಮೂವರು ಮಹಾನ್ ವ್ಯಕ್ತಿಗಳು ಸಮಾಜ್ಕಕೆ ಜ್ಞಾನ ಹಂಚಿದರು. ಆ ಮೂಲಕ ಸಮಾಜದಲ್ಲಿನ ಭ್ರಷ್ಟಾಚಾರ, ಅಸಮಾನತೆ ಹಾಗೂ ಪಿಡುಗುಗಳನ್ನು ತೊಳೆಯುವಲ್ಲಿ ಸಫಲರಾದರು. ವಿಶೇಷವೆಂದರೆ ಆಷಾಢ ಮಾಸದಲ್ಲಿ ಚಾಲನೆ ನೀಡುತ್ತಿರುವುದು ಬುದ್ದರು ಮೊದಲ ಬಾರಿಗೆ ಗುರುಭೋಧನೆ ನೀಡಿದ ಪವಿತ್ರ ಮಾಸವಾಗಿದೆ. ಹಾಗಾಗಿ ಪ್ರೀತಿ, ಕರುಣೆ, ಮಮತೆ ಹಂಚುವುದರಿಂದ ಸಮಾಜದ ಸಾಮರಸ್ಯವನ್ನು ಕಾಪಾಡಬಹುದು ಎಂದರು.
ಟ್ರಸ್ಟ್‍ನ ಆಡಳಿತಾಧಿಕಾರಿ ಮಹದೇವು ಚಿಜಲ್ ಮಾತನಾಡಿ, ಶೈಕ್ಷಣಿಕ ಸೇವೆ ಸಲ್ಲಿಸುವ ಉದ್ದೇಶದಿಂದ ಈ ಕ್ಷೇತ್ರಕ್ಕೆ ಬಂದೇವು. ಅನೇಕ ಆಗು ಹೋಗುಗಳ ನಡುವೆಯೂ ಗುಣಮಟ್ಟದಲ್ಲಿ ಗಮನಾರ್ಹ ಕೆಲಸಗಳನ್ನು ಮಾಡಿದ ಅನುಭವ ಆಗಿದೆ. ಮುಂದೆಯೂ ಹತ್ತು ಹಲವಾರು ಸೇವಾ ಕ್ಷೇತ್ರಗಳಲ್ಲಿ ಕಾರ್ಯೋನ್ಮುಖವಾಗಲಿದ್ಧೇವೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ತಾಪಂ ಮಾಜಿ ಉಪಾಧ್ಯಕ್ಷ ಟಿ.ನಾಗರಾಜ್, ಗ್ರಾಪಂ ಸದಸ್ಯ ಗೋಪಾಲಪುರ ಲೋಕೇಶ್, ಅಗತಗೌಡನಹಳ್ಳಿ ಬಸವರಾಜು, ಉಪನ್ಯಾಸಕ ಗುಡಿಕಾರ್ ಸದಾನಂದ, ಗೋವಿಂದ ರಾಜ್, ಚಿಜಲ್ ಸಂಸ್ಥೆಯ ಛೇರ್ಮನ್ ಮಹದೇವಮ್ಮ, ಆರ್.ಸೋಮಣ್ಣ, ಕೆ.ಎಂ.ಮನಸ್, ವಕೀಲರಾದ ರಾಜೇಶ್ ಹಂಗಳ, ಚಿಕ್ಕನಂಜಯ್ಯ, ಮದ್ದಯ್ಯನಹುಂಡಿ ನಾಗರಾಜ್, ಗೋವಿಂದ ಕುಣಗಳ್ಳಿ, ಗಿರೀಶ್ ಲಕ್ಕೂರು, ರಾಜೇಂದ್ರ ಪ್ರಸಾದ್ ಸೇರಿದಂತೆ ವಿದ್ಯಾರ್ಥಿನಿಯರು ಹಾಜರಿದ್ದರು. ಬುದ್ದ ಉಪಾಸಕ ಹ.ಜಲೇಂದ್ರ ಬುದ್ದ ವಂದನೆ ನೆರವೇರಿಸಿದರು.