ಬೆಂಗಳೂರು : ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರು ತಮ್ಮ 64ನೇ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಸರಳವಾಗಿ ಆಚರಿಸಿಕೊಂಡರು. ಈ ಬಾರಿ ಕೇಕ್, ಹಾರ ಹಾಗೂ ಉಡುಗೊರೆಗಳನ್ನು ತರದಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದ ಶಿವಣ್ಣ, ಬದಲಾಗಿ ತಮ್ಮ ಅಭಿಮಾನಿಗಳಿಗೆ ಆರೋಗ್ಯದ ರೂಪದಲ್ಲಿ ವಿಶೇಷ ಉಡುಗೊರೆ ನೀಡಿದ್ದಾರೆ.
ಹುಟ್ಟುಹಬ್ಬದ ಪ್ರಯುಕ್ತ ಶಿವರಾಜ್ಕುಮಾರ್ ಅವರು ‘ಹ್ಯಾಟ್ರಿಕ್ ಹೀರೋ ಫ್ಯಾಮಿಲಿ ಹೆಲ್ತ್ ಕಾರ್ಡ್’ ಬಿಡುಗಡೆ ಮಾಡಿದ್ದು, ಅಭಿಮಾನಿಗಳು ಹಾಗೂ ಅವರ ಕುಟುಂಬದ ಆರೋಗ್ಯ ಕಾಳಜಿಗಾಗಿ ಈ ಯೋಜನೆ ರೂಪಿಸಲಾಗಿದೆ.
ಈ ಹೆಲ್ತ್ ಕಾರ್ಡ್ ಮೂಲಕ ಸುಮಾರು 2500 ಕುಟುಂಬಗಳಿಗೆ ನೆರವಾಗುವ ಉದ್ದೇಶ ಹೊಂದಲಾಗಿದೆ. ಉಚಿತ ಆರೋಗ್ಯ ತಪಾಸಣೆ, ಹೃದಯ ಸಂಬಂಧಿ ಕಾಯಿಲೆಗಳ ಚಿಕಿತ್ಸೆಗೆ ವಿಶೇಷ ಸೌಲಭ್ಯ ಹಾಗೂ ತುರ್ತು ಸಂದರ್ಭಗಳಲ್ಲಿ ಹೈ ಸ್ಪೀಡ್ ಆಂಬುಲೆನ್ಸ್ ಸೇವೆ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಈ ಕಾರ್ಡ್ಗಳು 2029ರವರೆಗೆ ಮಾನ್ಯವಾಗಿರಲಿವೆ.
ವೈದೇಹಿ ಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದೊಂದಿಗೆ ಈ ಹೆಲ್ತ್ ಕಾರ್ಡ್ ಯೋಜನೆ ಆರಂಭಿಸಲಾಗಿದೆ. ಆರೋಗ್ಯದ ಮಹತ್ವವನ್ನು ಸಾರುವ ಉದ್ದೇಶದಿಂದ ಶಿವರಾಜ್ಕುಮಾರ್ ಅವರು ಈ ಪ್ರಯತ್ನ ಕೈಗೊಂಡಿದ್ದಾರೆ.
ಕಾರ್ಡ್ ವಿತರಣೆ ಬಳಿಕ ಮಾತನಾಡಿದ ಶಿವರಾಜ್ಕುಮಾರ್, ಇಂದು ನಾನು ಆರೋಗ್ಯವಾಗಿದ್ದೇನೆ ಎಂದರೆ ಅದರಲ್ಲಿ ವೈದೇಹಿ ಆಸ್ಪತ್ರೆಯ ಪಾತ್ರವೂ ಇದೆ. ಆರೋಗ್ಯದ ವಿಚಾರದಲ್ಲಿ ‘ಗೋಲ್ಡನ್ ಮಿನಿಟ್’ ಬಹಳ ಮುಖ್ಯ. ಅದು ಯಾರಿಗೂ ತಪ್ಪಬಾರದು. ನನ್ನ ಅಭಿಮಾನಿಗಳು ಮತ್ತು ಅವರ ಕುಟುಂಬದ ಆರೋಗ್ಯಕ್ಕಾಗಿ ಏನಾದರೂ ಮಾಡಬೇಕು ಎಂಬ ಆಸೆ ಇತ್ತು. ಅದಕ್ಕಾಗಿ ಈ ಪ್ರಯತ್ನ ಮಾಡಿದ್ದೇವೆ ಎಂದು ಹೇಳಿದರು.
ಇದೇ ವೇಳೆ ಯಾರಿಗೆ ಚಿಕಿತ್ಸೆಯ ವೆಚ್ಚ ಭರಿಸುವ ಸಾಮರ್ಥ್ಯವಿದೆಯೋ ಅವರು ಈ ಕಾರ್ಡ್ ತೆಗೆದುಕೊಳ್ಳಬೇಡಿ. ನಿಜವಾಗಿಯೂ ಅಗತ್ಯವಿರುವ ಕುಟುಂಬಗಳಿಗೆ ಇದು ತಲುಪಲಿ ಎಂದು ಶಿವಣ್ಣ ಅಭಿಮಾನಿಗಳಿಗೆ ಮನವಿ ಮಾಡಿದರು.



