ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಕೆ.ಆರ್.ನಗರ ಪಟ್ಟಣದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರೆತೆ ಇದ್ದು ಈ ಬಗ್ಗೆ ಕ್ರಮ ಕೈಗೊಂಡು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಹೇಳಿದರು.
ಬುಧವಾರ ಆಸ್ಪತ್ರೆಗೆ ಭೇಟಿ ನೀಡಿ ಬಾಣಂತಿಯರು ಮತ್ತು ಗರ್ಬೀಣಿಯರೊಂದಿಗೆ ಮಾತನಾಡಿ ಆಸ್ಪತ್ರೆ ಆರೋಗ್ಯ ಸಂಬಂಧಿತ ಯಾವುದೇ ಸಮಸ್ಯೆ ಗಳಿದ್ದರೂ ನನ್ನ ಗಮನಕ್ಕೆ ತರಬೇಕೆಂದು ತಿಳಿಸಿದ ಅವರು ರೋಗಿಗಳನ್ನು ಪ್ರೀತಿ ಮತ್ತು ಮಮತೆಯಿಂದ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಹೇರಿಗೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ನನಗೆ ಈಗ ಜನಿಸಿರುವ ಮಗುವು ಸೇರಿ ಮೂರು ಮಕ್ಕಳು ಹೆಣ್ಣು ಎಂದು ಕಣ್ಣೀರು ಹಾಕಿದಾಗ ಆ ತಾಯಿಯನ್ನು ಸಂತೈಸಿ ಯಾವುದೇ ಕಾರಣಕ್ಕೂ ನೀನು ದೃತಿಗೆಡದೆ ಹೆಣ್ಣು ಮಕ್ಕಳನ್ನೇ ಚೆನ್ನಾಗಿ ಓದಿಸಿ ಶಿಕ್ಷಿತರನ್ನಾಗಿ ಮಾಡಿ ಉತ್ತಮ ಭವಿಷ್ಯ ರೂಪಿಸಿಕೊಡಿ ಎಂದು ಧೈರ್ಯ ದ ಮಾತುಗಳನ್ನಾಡಿದರು.
ಮಾತನಾಡುವ ಸಮಯದಲ್ಲಿ ಆಕೆಗೆ ಮೊಬೈಲ್ ಸಂಖ್ಯೆ ನೀಡಿದ ಆಯೋಗದ ಅಧ್ಯಕ್ಷ ರು ನಿನಗೆ ಯಾವುದೇ ಸಮಸ್ಯೆ ಇದ್ದರು ನನಗೆ ಕರೆ ಮಾಡಿ ಎಂದು ಹೇಳಿ ನಿನ್ನ ಮಕ್ಕಳ ಓದು ಮತ್ತು ಭವಿಷ್ಯ ಕ್ಕೆ ಸರ್ಕಾರದಿಂದ ದೊರೆಯುವ ಎಲ್ಲಾ ಸವಲತ್ತುಗಳನ್ನು ಒದಗಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.
ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಅವರು ಇಲ್ಲಿನ ವೈದ್ಯರು ಮತ್ತು ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಸ್ವಚ್ಚತೆಯನ್ನು ಕಾಪಾಡುತ್ತಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ಇಲ್ಲಿಗೆ ಕೆ.ಆರ್.ನಗರ ಸೇರಿದಂತೆ ಸುತ್ತಮುತ್ತಲಿನ ನಾಲ್ಕಾರು ತಾಲೂಕಿನ ರೋಗಿಗಳು ಚಿಕಿತ್ಸೆಗೆ ಬರುತ್ತಿರುವುದರಿಂದ ಒತ್ತಡ ಹೆಚ್ಚಾಗಿದೆ ಎಂದರು.
ಆರೋಗ್ಯ ಇಲಾಖೆಯವರು ನಿಯೋಜನೆ ಮೇಲೆ ಕೆಲಸ ಮಾಡುತ್ತಿರುವವರನ್ನು ಮಾತೃ ಇಲಾಖೆಗೆ ವಾಪಾಸ್ಸ್ ಕಳುಹಿಸುವಂತೆ ಆದೇಶ ಮಾಡಿರುವುದರಿಂದ ಸಿಬ್ಬಂದಿಯ ಕೊರತೆ ಉಂಟಾಗಿ ಆರೋಗ್ಯ ಸೇವೆಯಲ್ಲಿ ವ್ಯತ್ಯಾಯವಾಗುತ್ತಿದ್ದು ಇದು ಸಿಬ್ಬಂದಿ ಸಮಸ್ಯೆಗೆ ಮೂಲ ಕಾರಣವಾಗಿದ್ದು ಈ ವಿಚಾರವನ್ನು ಸರ್ಕಾರ ದ ಗಮನಕ್ಕೆ ತರುತ್ತೇನೆಂದರು.
ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಸ್ವಚ್ಚವಾಗಿಟ್ಟುಕೊಂಡು ಬರುವ ಎಲ್ಲಾ ರೋಗಿಗಳಿಗೂ ಇಲ್ಲಿನ ಸಿಬ್ಬಂದಿಯಿಂದ ಉತ್ತಮ ಚಿಕಿತ್ಸೆ ಕೊಡಿಸುತ್ತಿರುವ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಬಿ.ಜೆ.ನವೀನ್ ಕುಮಾರ್ ಅವರ ಕಾರ್ಯವೈಖರಿಯನ್ನು ಶ್ಲಾಘೀಸಿದ ಡಾ.ನಾಗಲಕ್ಷಮಿ ಚೌಧರಿ ಇಂತಹ ಕೆಲಸ ಮಾಡುವವರಿಗೆ ನನ್ನ ಬೆಂಬಲ ಸದಾ ಇದೆ ಎಂದರು.
ಆನಂತರ ಅವರು ಪಟ್ಟಣದ ಹಾಸನ ಮೈಸೂರು ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪುರಸಭೆ ಸದಸ್ಯರಾದ ಕೋಳಿಪ್ರಕಾಶ್, ನಟರಾಜು, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಲೋಕೇಶ್, ಹೆಚ್.ಹೆಚ್.ನಾಗೇಂದ್ರ, ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಬಿ.ವಿ.ವೆಂಕಟೇಶ್, ಸಿಡಿಪಿಒ ಸಿ.ಎಂ.ಅಣ್ಣಯ್ಯ, ಸಮಾಜ ಕಲ್ಯಾಣಾಧಿಕಾರಿ ಶಂಕರ್ ಮೂರ್ತಿ, ಸಾಲಿಗ್ರಾಮ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ರಾಣಿ, ಕೆ.ಆರ್.ನಗರ ಘಟಕದ ಅಧ್ಯಕ್ಷೆ ಲತಾರವಿ, ಡಾ ದಿವ್ಯತ, ಡಾ.ಭವಾನಿ, ಡಾ.ದರ್ಶನ್, ಡಾ.ಚಂದ್ರಶೇಖರ್, ಡಾ.ದಿಪ್ತಿ, ಡಾ.ವೇದಾವತಿ, ಡಾ.ಪ್ರೇಮಲತಾ ಸೇರಿದಂತೆ ಮತ್ತಿತರರು ಇದ್ದರು.