ನಾಗ್ಪುರ: ರಾಜಕೀಯದಲ್ಲಿ 75 ವರ್ಷ ದಾಟಿದವರು ಸ್ವಯಂ ನಿವೃತ್ತರಾಗಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಎರಡು ದಿನಗಳ ಹಿಂದೆ ನೀಡಿದ ಹೇಳಿಕೆ ರಾಜಕೀಯ ಸಂಚಲನ ಮೂಡಿಸಿದೆ. ಇದೇ ಸೆಪ್ಟೆಂಬರ್‌ಗೆ 75 ವರ್ಷಗಳನ್ನು ಪೂರೈಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿಯೇ ಹೇಳಿರಬಹುದು ಎಂದು ವ್ಯಾಖ್ಯಾನಿಸಲಾಗುತ್ತಿದೆ. ಆರ್ ಎಸ್ ಎಸ್ ಸಿದ್ಧಾಂತದ ಪ್ರತಿಪಾದಕ ಮೊರೊಪಂತ್ ಪಿಂಗಲೆ ಅವರ ಕುರಿತಾದ ಪುಸಕ್ತ ಬಿಡುಗಡೆ ಸಮಾರಂಭದಲ್ಲಿ ಭಾಗವತ್ ಮಾತನಾಡುತ್ತಾ ಈ ಹೇಳಿಕೆ ನೀಡಿದ್ದರು.
ಮೊರೊಪಂತ್ ಪಿಂಗಲೆ ಅವರೇ ಹೇಳಿದ್ದ ʼ75 ವರ್ಷ ತುಂಬಿದಾಗ ಶಾಲು ಹೊದಿಸಿ ಸನ್ಮಾನಿಸಿದರೆ, ವಯಸ್ಸಾಯಿತು, ನಿವೃತ್ತರಾಗಬೇಕು ಎಂಬುದನ್ನು ನಾವೇ ಅರ್ಥ ಮಾಡಿಕೊಳ್ಳಬೇಕು. ಆ ತಕ್ಷಣವೇ ಅಧಿಕಾರದಿಂದ ಕೆಳಗಿಳಿದು ಇತರರಿಗೆ ದಾರಿ ಮಾಡಿಕೊಡಬೇಕುʼ ಎಂಬ ಮಾತನ್ನು ಭಾಗವತ್ ಸ್ಮರಿಸಿಕೊಂಡಿದ್ದರು. ಈ ಹೇಳಿಕೆಗೆ ವಿಭಿನ್ನ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕಾಂಗ್ರೆಸ್ ದೇಶಕ್ಕೆ ‘ಅಚ್ಚೇ ದಿನ ಬರಲಿದೆ ಎಂದು ವ್ಯಂಗ್ಯವಾಡಿದೆ.
ಶಿವಸೇನಾ (ಯುಬಿಟಿ) ರಾಜ್ಯಸಭಾ ಸದಸ್ಯ ಸಂಜಯ್ ರಾವುತ್, ಎಲ್.ಕೆ. ಅಡ್ವಾನಿ, ಮುರಳಿ ಮನೋಹರ ಜೋಶಿ ಹಾಗೂ ಜಸ್ವಂತ್ ಸಿಂಗ್ ಅವರಿಗೆ 75 ವರ್ಷ ತುಂಬಿದ ತಕ್ಷಣ ನಿವೃತ್ತರಾಗುವಂತೆ ಪ್ರಧಾನಿ ನರೇಂದ್ರ ಮೋದಿ ಅವರೇ ಒತ್ತಡ ಹೇರಿದ್ದರು. ಈಗ ಅದೇ ನಿಯಮ ತಮಗೂ ಅನ್ವಯಿಸುವಂತೆ ನೋಡಿಕೊಳ್ಳುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿಯಾಗಿ ಹತ್ತು ವರ್ಷದಲ್ಲಿ ಒಂದು ಬಾರಿಯೂ ಆರ್ ಎಸ್ ಎಸ್ ಕಚೇರಿಗೆ ಭೇಟಿ ನೀಡಿರದ ಅವರು ಕಳೆದ ವರ್ಷ ಹೋಗಿದ್ದರು. ಅದು ನಿವೃತ್ತಿಯ ಚರ್ಚೆಗೆ ಇದ್ದಿರಬಹುದು. ಆದರೆ ಅಂಥ ಚರ್ಚೆಯೇ ನಡೆದಿಲ್ಲ ಎಂದು ಬಿಜೆಪಿ ನಾಯಕರು ಹೇಳಿದ್ದರು. ಬಿಜೆಪಿ ಸಂವಿಧಾನದಲ್ಲಿ ನಿವೃತ್ತಿಯ ಪ್ರಸ್ತಾಪವೇ ಇಲ್ಲ ಎಂದು 2023ರಲ್ಲಿ ಅಮಿತ್ ಶಾ ಹೇಳಿದ್ದರು. ನಿವೃತ್ತಿಯ ಚರ್ಚೆ ಊಹಾಪೋಹಗಳೇ ಹೊರತು ನಿಜವಲ್ಲ. ಇಂಥ ಸುಳ್ಳುಗಳಿಂದ ಇಂಡಿಯಾ ಬಣ ಗೆಲುವು ಸಾಧಿಸದು ಎಂದೂ ಶಾ ಹೇಳಿದ್ದನ್ನು ರಾವುತ್ ಸ್ಮರಿಸಿಕೊಂಡಿದ್ದಾರೆ.
ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಇದು “ಸ್ಪಷ್ಟ ಸಂದೇಶ”. ಆರ್‌ಎಸ್‌ಎಸ್ ಮತ್ತು ಬಿಜೆಪಿ ನಡುವೆ ಏನು ನಡೆಯುತ್ತಿದೆ ಎಂಬುದು ಮೋಹನ್ ಭಾಗವತ್ ಅವರ ಹೇಳಿಕೆಗಳಿಂದ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಹೇಳಿದ್ದಾರೆ.
ನರೇಂದ್ರ ಮೋದಿ ಮೋಹನ್ ಭಾಗವತ್ ಇಬ್ಬರೂ 1950ರಲ್ಲಿ ಜನಿಸಿದವರು. ಇಬ್ಬರಿಗೂ ಇದೇ ಸೆಪ್ಟೆಂಬರ್‌ನಲ್ಲಿ 75 ವರ್ಷ ಪೂರ್ಣಗೊಳ್ಳುವ ಸಂದರ್ಭದಲ್ಲೇ ಹೊರಬಿದ್ದ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.