ಮೈಸೂರು: ಕರ್ನಾಟಕ ಪೊಲೀಸ್ ಅಕಾಡೆಮಿಯ ಪ್ರಥಮ ದರ್ಜೆ ಸಹಾಯಕಿ ಟಿ.ಪಿ.ಶ್ವೇತಾ ಅವರು ಕೇಂದ್ರ ಗೃಹಮಂತ್ರಿಗಳ ವಿಶೇಷ ಪದಕಕ್ಕೆ ಭಾಜನರಾಗಿದ್ದಾರೆ.
2020-2021ನೇ ಸಾಲಿನಿಂದ 2022-2023ನೇ ಸಾಲಿನ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಘೋಷಿಸಲಾದ ರಾಷ್ಟ್ರಪತಿಗಳ ಪೊಲೀಸ್ ವಿಶಿಷ್ಟ ಸೇವಾ ಪದಕ, ಪೊಲೀಸ್ ಶ್ಲಾಘನೀಯ ಸೇವಾ ಪದಕ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಘೋಷಿಸಲಾದ ಕೇಂದ್ರ ಗೃಹ ಮಂತ್ರಿಗಳ ಪದಕಗಳನ್ನು ಪದಕ ಪುರಸ್ಕೃತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಆ.30ರಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ರಾಜಭವನದ ಗಾಜಿನ ಮನೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪದಕ ಪ್ರದಾನ ನಡೆಯಲಿದೆ.
ಕರ್ನಾಟಕ ಪೊಲೀಸ್ ಅಕಾಡೆಮಿಯ ಮೈಸೂರು ಕೇಂದ್ರದಲ್ಲಿ ಎಫ್‌ಡಿಎ ಆಗಿರುವ ಶ್ವೇತಾ ಅವರ ಕಾರ್ಯವೈಖರಿ ಗುರುತಿಸಿ ಈ ಪದಕಕ್ಕೆ ಆಯ್ಕೆ ಮಾಡಲಾಗಿದೆ. ಮೈಸೂರಿನ ಪೊಲೀಸ್ ಅಕಾಡೆಮಿಯ ಮತ್ತಿಬ್ಬರು ಹಿರಿಯ ಅಧಿಕಾರಿಗಳು ಕೂಡ ವಿಶಿಷ್ಟ ಪದಕಕ್ಕೆ ಭಾಜನರಾಗಿದ್ದಾರೆ. ಈ ಹಿಂದೆ ಮೈಸೂರು ಕೇಂದ್ರದ ಉಪನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಆರ್.ಎಂ. ಗಂಜಿಕಟ್ಟಿ ನಿವೃತ್ತರಾಗಿದ್ದರೆ, ವಿಶೇಷ ಎಆರ್ ಎಸ್ಐ ಜಿ.ಎನ್.ತಾರಸೆ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದಾರೆ.