Friday, December 5, 2025
Google search engine

Homeರಾಜ್ಯಸುದ್ದಿಜಾಲಸಿದ್ದರಾಮಯ್ಯ ಸರ್ಕಾರ ನುಡಿದಂತೆ ನಡೆಯುವ ಸರ್ಕಾರವಲ್ಲ : ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ

ಸಿದ್ದರಾಮಯ್ಯ ಸರ್ಕಾರ ನುಡಿದಂತೆ ನಡೆಯುವ ಸರ್ಕಾರವಲ್ಲ : ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ

ಮೈಸೂರು: ರೈತರು ಮತ್ತು ಕೃಷಿ ವಿಷಯದಲ್ಲಿ ಸಿದ್ದರಾಮಯ್ಯ ಸರ್ಕಾರ ನುಡಿದಂತೆ ನಡೆದುಕೊಂಡಿಲ್ಲ ಹಾಗೂ ಭೂ ಸುಧಾರಣೆ ಮತ್ತು ಜಾನುವಾರು ಹತ್ಯೆ ನಿಷೇಧ ಕಾಯ್ದೆಯನ್ನು ಬೆಳಗಾವಿಯಲ್ಲಿ ನಡೆಯುವ ಚಳಿಗಾಲ ಅಧಿವೇಶನದಲ್ಲಿ ಹಿಂಪಡೆದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಜಾರಿಯಿರುವ ಭೂ ಸುಧಾರಣೆ ಕಾಯ್ದೆ ಮತ್ತು ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ ರೈತರಿಗೆ ಮಾರಕವಾಗಿದೆ. ಚುನಾವಣೆ ಸಂದರ್ಭ ಎರಡೂ ಕಾಯಿದೆ ವಾಪಾಸ್ ತೆಗೆದುಕೊಳ್ಳಲಾಗುವುದು ಎಂದು ಸಿದ್ದರಾಮಯ್ಯ ನೀಡಿದ್ದ ಭರವಸೆ ಇದೀಗ ಹುಸಿಯಾಗಿದೆ ಎಂದು ಕಿಡಿಕಾರಿದ್ದಾರೆ.

ಇನ್ನೂ ರೈತರ ವಿರೋಧಿಯಾಗಿರುವ ಕೃಷಿ ಮಾರುಕಟ್ಟೆ ರಾಷ್ಟ್ರೀಯ ಚೌಕಟ್ಟು ಕಾಯ್ದೆ, ಬೀಜ ಕಾಯ್ದೆ, ವಿದ್ಯುಚ್ಛಕ್ತಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ತಕ್ಷಣ ಹಿಂಪಡೆದುಕೊಳ್ಳಬೇಕು. ಸಿದ್ದರಾಮಯ್ಯ ಸರ್ಕಾರ ಸಹ ರಾಜ್ಯದಲ್ಲಿ ಈ ಮೂರು ಕಾಯ್ದೆಗಳನ್ನು ತಿರಸ್ಕರಿಸುವ ಕುರಿತು ಬೆಳಗಾವಿ ಅಧಿವೇಶನದಲ್ಲಿ ನಿರ್ಣಯ ತೆಗೆದುಕೊಳ್ಳಬೇಕು ಎಂದು ಈ ವೇಳೆ ಒತ್ತಾಯಿಸಿದ್ದಾರೆ.

ಮುಂದುವರೆಸುತ್ತಾ ಕೃಷಿ, ರೈತರು, ಕಾರ್ಮಿಕರು, ನೀರಾವರಿ, ಕೈಗಾರಿಕೆ, ರಫ್ತು-ಆಮದು ನೀತಿಗಳ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಒಂದೇ. ಇವುಗಳಲ್ಲಿ ಭಿನ್ನತೆಯೇ ಇಲ್ಲ ಮತ್ತು ಇವುಗಳ ನೀತಿಗಳಲ್ಲೂ ವ್ಯತ್ಯಾಸವಿಲ್ಲ. 1994ರಲ್ಲಿ ವಿಶ್ವ ವ್ಯಾಪಾರ ಒಪ್ಪಂದವನ್ನು ಈ ಪಕ್ಷಗಳು ಚಾಚು ತಪ್ಪದೆ ಜಾರಿಗೆ ತರುತ್ತಿವೆ ಎಂದು ಕಿಡಿಕಾರಿದರು.

ರೈತರು, ಕೃಷಿ ವಿಷಯದಲ್ಲಿ ಸಿದ್ದರಾಮಯ್ಯ ಸರ್ಕಾರ ನುಡಿದಂತೆ ನಡೆಯುವ ಸರ್ಕಾರವಲ್ಲ. ಉಭಯ ಕಾಯ್ದೆಗಳು ವಾಪಸ್ ಪಡೆದುಕೊಂಡಿಲ್ಲ ಎಂಬುದೇ ಇದಕ್ಕೆ ಸಾಕ್ಷಿ ಎಂದು ಈ ಕುರಿತು ಬರೀ ನಾಟಕವಾಡುತ್ತಿದೆ ಎಂದಿದ್ದಾರೆ. ಭೂಸುಧಾರಣೆ ಕಾಯ್ದೆ ತಿದ್ದುಪಡಿ ಬಳಿಕ ಗುಜರಾತ್ ಮೂಲದ ಬಂಡವಾಳಶಾಹಿಗಳು ಮೈಸೂರು, ಚಾಮರಾಜನಗರ ಜಿಲ್ಲೆ ಸೇರಿದಂತೆ ರಾಜ್ಯದ ಮೇಲೆ ದಾಳಿ ಇಟ್ಟು ಕೃಷಿ ಭೂಮಿ ಕಬಳಿಸುತ್ತಿದ್ದಾರೆ. ಒಂದು ಎಕರೆ ಕೃಷಿ ಭೂಮಿ 10 ಲಕ್ಷ ರೂಪಾಯಿಯಿಂದ 1 ಕೋಟಿ ರೂ.ಗೆ ಏರಿಕೆಯಾಗಿದೆ. ಒಂದು ಗುಂಟೆ ಜಾಗವನ್ನೂ ಖರೀದಿಸಲು ರೈತರಿಗೆ ಆಗುತ್ತಿಲ್ಲ. ಸದ್ಯಕ್ಕೆ ಇರುವ ಭೂಮಿಯನ್ನೂ ಉಳಿಸಿಕೊಳ್ಳಲಾಗುತ್ತಿಲ್ಲ ಇದಕ್ಕೆ ತಡೆವೊಡ್ಡಬೇಕು. ಭೂ ಉಪಯೋಗ ನೀತಿ ರೂಪಿಸಬೇಕು ಎಂದು ಒತ್ತಾಯಿಸಿದ್ದರು.

ವಿದ್ಯುತ್ ಅಕ್ರಮ ಸಂಪರ್ಕವನ್ನು ಸಕ್ರಮಗೊಳಿಸಿಕೊಳ್ಳಲು ಮತ್ತು ಹೊಸ ಸಂಪರ್ಕ ಪಡೆಯಲು ರೈತರೇ ವೆಚ್ಚ ಭರಿಸಬೇಕೆಂಬ ನೀತಿ ಬದಲಾಯಿಸಿ ಹಳೇ ಪದ್ಧತಿ ಮುಂದುವರಿಸಬೇಕು. ಯಾವುದೇ ಕಾರಣಕ್ಕೂ ಕೃಷಿ ಪಂಪ್‍ಸೆಟ್‍ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಕೆ ಮಾಡಬಾರದು. ರಾಜ್ಯ ಸರ್ಕಾರ ಕಬ್ಬಿಗೆ ಎಸ್‍ಎಪಿ ನೀಡುವ ಕಾನೂನು ಜಾರಿಗೆ ತರಬೇಕು. ಕೃಷಿ ಬೆಲೆ ಆಯೋಗವನ್ನು ಶಾಶ್ವತ ಆಯೋಗವನ್ನಾಗಿ ರೂಪಿಸಿ ಅದಕ್ಕೆ ಶಾಸನಾತ್ಮಕ ಅಧಿಕಾರ ನೀಡಬೇಕು. ಖರೀದಿ ಕೇಂದ್ರ ತೆರೆದು ಮೆಕ್ಕಜೋಳ, ಭತ್ತವನ್ನು ಎಂಎಸ್‍ಪಿ ದರದಲ್ಲಿ ಕೊಳ್ಳಬೇಕು ಮತ್ತು ರೈತರ ಸಂಪೂರ್ಣ ಸಾಲವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಶೇ.50ರ ಅನುಪಾತದಲ್ಲಿ ಮನ್ನಾ ಮಾಡಬೇಕು. ಸರಳ ಸಾಲದ ನೀತಿ ರೂಪಿಸಿ ಶೂನ್ಯಬಡ್ಡಿಯಲ್ಲಿ ಸಾಲ ನೀಡಬೇಕು. ತಂಬಾಕು ಬೆಳೆಗೆ ಕೆಜಿಗೆ ಸರಾಸರಿ 400 ರೂ. ಬೆಲೆ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿ ಖಂಡಿಸಿ, ರೈತಪರ ಯೋಜನೆ ರೂಪಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಬೃಹತ್ ಜಿಲ್ಲಾ ರೈತ ಸಮಾವೇಶವನ್ನು ಡಿ.23ರಂದು ಬೆಳಗ್ಗೆ 11ಕ್ಕೆ ಮೈಸೂರು ತಾಲೂಕಿನ ಇಲವಾಲ ಗ್ರಾಮದ ಸಂತೆ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರೈತ ಹೋರಾಟಗಾರರಾದ ಹೊಸೂರು ಕುಮಾರ್, ಹೊಸಕೋಟೆ ಬಸವರಾಜು ಇದ್ದರು.

RELATED ARTICLES
- Advertisment -
Google search engine

Most Popular