Friday, December 26, 2025
Google search engine

Homeರಾಜಕೀಯದೆಹಲಿಯತ್ತ ಸಿದ್ದರಾಮಯ್ಯ ಪ್ರಯಾಣ, ಡಿಕೆಶಿಗೆ ಇಲ್ಲ ಆಹ್ವಾನ..!

ದೆಹಲಿಯತ್ತ ಸಿದ್ದರಾಮಯ್ಯ ಪ್ರಯಾಣ, ಡಿಕೆಶಿಗೆ ಇಲ್ಲ ಆಹ್ವಾನ..!

ಬೆಂಗಳೂರು: ಕಾಂಗ್ರೆಸ್ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ ಶನಿವಾರ ದೆಹಲಿಯಲ್ಲಿ ನಡೆಯಲಿದ್ದು, ಸಮಿತಿ ಸಭೆಯಲ್ಲಿ ಮುಂದಿನ ಹೋರಾಟಗಳ ಕುರಿತಾಗಿ ಕೆಲವೊಂದು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಸಭೆಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಆಹ್ವಾನ ಸಿಕ್ಕಿದ್ದು, ಹೀಗಾಗಿ ಶುಕ್ರವಾರ ಅವರು ದೆಹಲಿಗೆ ತೆರಳಲಿದ್ದಾರೆ. ಆದರೆ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಕಾರ್ಯಕಾರಿ ಸಭೆಗೆ ಆಹ್ವಾನ ಇಲ್ಲದಿರುವುದು. ರಾಜ್ಯ ಕಾಂಗ್ರೆಸ್ ವಲಯದಲ್ಲೂ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ.

ಇನ್ನೂ ಕಾರ್ಯಕಾರಿ ಸಭೆಯಲ್ಲಿ ಭಾಗಿಯಾಗುವ ಉದ್ದೇಶದಿಂದ ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ರಾತ್ರಿ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಲಿದ್ದಾರೆ. ದೆಹಲಿಯಲ್ಲಿ ಕಾರ್ಯಕಾರಿ ಸಭೆಯಲ್ಲಿ ಭಾಗಿಯಾದ ಬಳಿಕ ಅವರು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದಿದ್ದು, ರಾಜ್ಯದಲ್ಲಿ ನಾಯಕತ್ವ ಕುರಿತಾಗಿ ನಡೆಯುತ್ತಿರುವ ಬೆಳವಣಿಗೆಯ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ದೆಹಲಿ ಪ್ರವಾಸ ಸಾಕಷ್ಟು ಮಹತ್ವ ಪಡೆದುಕೊಂಡಿದೆ.

ಇನ್ನೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಗೆ ಡಿಕೆಶಿ ಅವರಿಗೆ ಆಹ್ವಾನ ಬಂದಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ನನಗೆ ಆಹ್ವಾನ ಬಂದರೆ ಖಂಡಿತಾ ಭಾಗವಹಿಸುವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಸಭೆಗೆ ಕಾಂಗ್ರೆಸ್‌ ಆಡಳಿತದ ಮೂರು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಲಾಗಿದೆ. ನನಗೆ ಇದುವರೆಗೆ ಆಹ್ವಾನ ಬಂದಿಲ್ಲ. ಕೆಪಿಸಿಸಿ ಅಧ್ಯಕ್ಷನಾಗಿ ಸಮಿತಿಯ ವಿಸ್ತರಿತ ಸಭೆಗೆ ಕರೆಯುತ್ತಾರೆ ಎಂದು ಹೇಳಿದರು.

ಈ ನಡುವೆ ಡಿಕೆ ಶಿವಕುಮಾರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಗುರುವಾರ ಭೇಟಿ ಮಾಡಿದ್ದರು. ಖರ್ಗೆ ಅವರ ಬೆಂಗಳೂರು ನಿವಾಸಕ್ಕೆ ತೆರಳಿದ್ದ ಡಿಕೆ ಶಿವಕುಮಾರ್ ಸುಮಾರು ಒಂದು ಗಂಟೆಗಳ ಕಾಲ ಮಾತುಕತೆ ನಡೆಸಿದ್ದರು. ಖರ್ಗೆ ಅವರನ್ನು ಭೇಟಿ ಆದ ಬಳಿಕ ಡಿಕೆ ಶಿವಕುಮಾರ್ ಮಾತಿನ ಧಾಟಿಯಲ್ಲೂ ವ್ಯತ್ಯಾಸ ಕಾಣಿಸುತ್ತಿದೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಪಕ್ಷದ ಕಚೇರಿಯಲ್ಲಿ ಕಸ ಗುಡಿಸಿದ್ದೇನೆ, ಬಾವುಟ ಕಟ್ಟಿದ್ದೇನೆ ಎಂದಿದ್ದರು.

ಅಲ್ಲದೆ, ವೇದಿಕೆಗೆ ಬಂದು ಕೇವಲ ಭಾಷಣ ಮಾಡಿಕೊಂಡು ಹೋಗಿಲ್ಲ ಎಂದಿದ್ದರು. ನಾಯಕತ್ವ ಬದಲಾವಣೆಯ ಚರ್ಚೆಯ ಈ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಆಡಿರುವ ಈ ಮಾತುಗಳು ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಡಿಕೆಶಿ ಆಡಿರುವ ಮಾತು ಯಾರನ್ನು ಉದ್ದೇಶಿಸಿ ಆಗಿತ್ತು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಎಲ್ಲಾ ಬೆಳವಣಿಗೆಯ ನಡುವೆ ಸಿಎಂ ಮಾತ್ರ ದೆಹಲಿಗೆ ತೆರಳುತ್ತಿದ್ದಾರೆ. ಆದರೆ ಡಿಕೆ ಶಿವಕುಮಾರ್ ಅವರಿಗೆ ಇನ್ನೂ ಆಹ್ವಾನ ಬಂದಿಲ್ಲ. ಈ ಹಿಂದೆಯೂ ಡಿಕೆಶಿ ದೆಹಲಿಗೆ ತೆರಳಿದ್ದ ಸಂದರ್ಭದಲ್ಲಿ ರಾಹುಲ್ ಗಾಂಧಿ ಅಥವಾ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲು ಅವಕಾಶ ಸಿಕ್ಕಿರಲಿಲ್ಲ. ಆದರೆ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು ಎಂಬುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

RELATED ARTICLES
- Advertisment -
Google search engine

Most Popular