ಬೆಂಗಳೂರು : ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಸುದೀರ್ಘ ಅವಧಿಯ ಮುಖ್ಯಮಂತ್ರಿ ಎಂಬ ದಾಖಲೆ ಸರಿಗಟ್ಟಿದ ಬೆನ್ನಲ್ಲೇ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಯ ಪೂರ್ಣಾವಧಿ ಪೂರೈಸಬೇಕು ಎಂದು ಸರ್ಕಾರದ ಹಾಲಿ ಹಾಗೂ ಮಾಜಿ ಸಚಿವರು ಬಹಿರಂಗವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಮತ್ತು ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ಕೆ.ಎನ್.ರಾಜಣ್ಣ, ಬಸವರಾಜ ರಾಯರೆಡ್ಡಿ ಸೇರಿದಂತೆ ಹಲವರು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿ ಪೂರ್ಣಾವಧಿ ಪೂರೈಸಬೇಕು ಎಂದಿದ್ದು, ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿರುವ ಸಚಿವ ಹೆಚ್.ಸಿ.ಮಹದೇವಪ್ಪ ಅವರು, ಸಿದ್ದರಾಮಯ್ಯ ಮುಳುಗಿದರೆ ಕಾಂಗ್ರೆಸ್ ಮತ್ತು ಅಹಿಂದ ವರ್ಗ ಮುಳುಗುತ್ತದೆ. ಸಿದ್ದರಾಮಯ್ಯ ಇಲ್ಲದಿರುವ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಅವರು 2028ರವರೆಗೆ ಗಟ್ಟಿಯಾಗಿರಬೇಕು ಎಂದು ಹೇಳಿದ್ದಾರೆ.
ಈ ನಡುವೆ ಬೆಂಗಳೂರಿನಲ್ಲಿ ಮಾತನಾಡಿರುವ ಮಾಜಿ ಸಚಿವ ಕೆ.ಎನ್. ರಾಜಣ್ಣ, ಯಡಿಯೂರಪ್ಪ ಇಲ್ಲದಿದ್ದರೆ ಬಿಜೆಪಿ ಇಲ್ಲ, ದೇವೇಗೌಡರು ಇಲ್ಲದಿದ್ದರೆ ಜೆಡಿಎಸ್ ಇಲ್ಲ, ಹಾಗೆಯೇ ಸಿದ್ದರಾಮಯ್ಯ ಇಲ್ಲ ಎಂದರೆ ಕಾಂಗ್ರೆಸ್ ಪಕ್ಷವಿಲ್ಲ. ಸಿದ್ದರಾಮಯ್ಯ ಅವರು ಶಾಸಕರ ಅಭಿಪ್ರಾಯದ ಮೇಲೆ ಸಿಎಲ್‌ಪಿ ನಾಯಕರಾಗಿದ್ದಾರೆ. ಸಿಎಲ್‌ಪಿ ಹಾಗೂ ಹೈಕಮಾಂಡ್ ಸಹಾನುಭೂತಿ ಇರಬೇಕು. ಸಿದ್ದರಾಮಯ್ಯ ಅವರು ಪೂರ್ಣಾವಧಿ ಪೂರೈಸಬೇಕು ಎಂದಿದ್ದಾರೆ.
ಇನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, 2028ರವರೆಗೆ ನೀವೇ ಕರ್ನಾಟಕದ ಮುಖ್ಯಮಂತ್ರಿ ಆಗಿರಬೇಕು ಎಂದಿದ್ದು, ಮುಂದಿನ ಎರಡೂವರೆ ವರ್ಷಗಳ ಕಾಲ ಅಂದರೆ 28 ಮೇ 2028 ರವರೆಗೆ ಈ ರಾಜ್ಯದ ಮುಖ್ಯಮಂತ್ರಿಗಳಾಗಿ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುತ್ತೀರಿ ಎಂದು ನಂಬಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಇದೇ ವಿಚಾರವಾಗಿ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ರಾಯರೆಡ್ಡಿ, ಮುಖ್ಯಮಂತ್ರಿ ಬದಲಾವಣೆ ವಿಚಾರ ಮಾಧ್ಯಮ ಸೃಷ್ಟಿ. ಮುಖ್ಯಮಂತ್ರಿ ಬದಲಾವಣೆ ಆಗಬೇಕಾದರೆ ಶಾಸಕರ ಅಭಿಪ್ರಾಯ ಪಡೆಯಬೇಕು. ಇದೆಲ್ಲವೂ ಆಗದೇ ಹೇಗೆ ಬದಲಾವಣೆ ಆಗುತ್ತದೆ?. ಡಿ.ಕೆ.ಶಿವಕುಮಾರ್ ಆಕಾಂಕ್ಷಿ ಆಗುವುದರಲ್ಲಿ ತಪ್ಪಿಲ್ಲ. ಆದರೆ ಸಮಯ ಸಂದರ್ಭ ಮುಖ್ಯ ಆಗುತ್ತದೆ. 5 ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಈ ವೇಳೆ ಪುನರುಚ್ಛಾರ ಮಾಡಿದ್ದಾರೆ.



