ಮೈಸೂರು: ಸಿಎಂ ಸಿದ್ದರಾಮಯ್ಯ ಮುಳುಗಿದರೆ ಕಾಂಗ್ರೆಸ್ ಮತ್ತು ಅಹಿಂದ ವರ್ಗ ಮುಳುಗುತ್ತದೆ ಎಂದು ಸಚಿವ ಹೆಚ್.ಸಿ.ಮಹದೇವಪ್ಪ ಹೇಳಿದರು.
ಮೈಸೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಇಲ್ಲದೆ ಇರೋ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಎಷ್ಟು ಜನನಾ ಸಿಎಂ ಸಿಎಂ ಎಂದು ಸುಮ್ಮನೆ ಘೋಷಣೆ ಕೂಗ್ತಿರಾ? ನನ್ನನ್ನು ಸೇರಿದಂತೆ ಎಲ್ಲರನ್ನೂ ಸುಮ್ಮನೆ ಮುಂದಿನ ಸಿಎಂ ಸಿಎಂ ಘೋಷಣೆ ಕೂಗುತ್ತಾರೆ. ದಲಿತ ಸಂಘಟನೆಯ ಮುಖಂಡರು ಬುದ್ಧಿವಂತರು. ಸಿದ್ದರಾಮಯ್ಯರೇ ಸಿಎಂ ಆಗಿರಲಿ. ಅವರು ಬದಲಾಗುವುದಾದರೆ ದಲಿತರಿಗೆ ಅವಕಾಶ ಕೊಡಿ ಅಂತಾರೆ ಎಂದು ತಿಳಿಸಿದರು.
2028 ರವರೆಗೂ ಸಿದ್ದರಾಮಯ್ಯ ಗಟ್ಟಿಯಾಗಿರಬೇಕು. ಈ ಬಾರಿ ಸಿದ್ದರಾಮಯ್ಯ ತಮ್ಮ ಅವಧಿ ಪೂರೈಸಬೇಕು. ಮುಂದಿನ ಅವಧಿಗೂ ಸಿದ್ದರಾಮಯ್ಯ ಇರಬೇಕು ಎಂಬುದಕ್ಕೆ ನಮ್ಮ ತಕರಾರು ಇಲ್ಲ. ‘ಮತ್ತೆ ಮುಖ್ಯಮಂತ್ರಿ’ ಎಂಬ ನಾಟಕವನ್ನು ಸಿಎಂ ಸಿದ್ದರಾಮಯ್ಯರು ನೋಡಬೇಕು. ಮತ್ತೆ ಮುಖ್ಯಮಂತ್ರಿ ನಾಟಕದಲ್ಲಿ ಇಡೀ ರಾಜಕೀಯದ ಚಿತ್ರಣವೇ ಇದೆ. ಸಿದ್ದರಾಮಯ್ಯ ಯಾವತ್ತೂ ಹೊಗಳಿಕೆಗೆ ಬೆಲೆ ಕೊಟ್ಟವರಲ್ಲ. ಇದ್ದರೆ ಇರುತ್ತೆ, ಹೋದ್ರೆ ಹೋಗುತ್ತೆ ಬಿಡಿ ಎನ್ನುವ ಮನಸ್ಥಿತಿ ಸಿದ್ದರಾಮಯ್ಯರದ್ದು. ಹಾಗಂತ ನಾವು ಅವರನ್ನು ಬಿಡುವುದಕ್ಕೆ ಬಿಡಬಾರದು. ಸಿದ್ದರಾಮಯ್ಯ ಮುಳುಗಿದರೆ ಕಾಂಗ್ರೆಸ್ ಮುಳುಗುತ್ತದೆ. ಸಿದ್ದರಾಮಯ್ಯ ಮುಳುಗಿದರೆ ಅಹಿಂದ ವರ್ಗ ಮುಳುಗುತ್ತದೆ ಎಂದು ಎಚ್ಚರಿಸಿದರು.
ಸಿದ್ದರಾಮಯ್ಯ ನಾಯಕತ್ವ ಗಟ್ಟಿ ಮಾಡಬೇಕು. ಕೆಲವರು ನಾಯಕತ್ವ ಅಲ್ಲಾಡಿಸಲು ಪ್ರಯತ್ನ ಪಡುತ್ತಾರೆ. ಅಧಿಕಾರ ಪಡೆಯುವರಿಗೆ ಹೋರಾಟ ಇರಬೇಕು. ವ್ಯಕ್ತಿತ್ವ ಇರಬೇಕು. ನೈತಿಕತೆ ಇರಬೇಕು. ಇಂಥವರಿಗೆ ಅಧಿಕಾರ ಕೊಡಬೇಕು. ಯಾರ ಬಳಿ ಏನೋ ಇದೆ ಎಂದು ಅಧಿಕಾರ ಕೊಡಲು ಆಗಲ್ಲ. ಸಿದ್ದರಾಮಯ್ಯ ಮಾಸ್ ಲೀಡರ್. ಸಿದ್ದರಾಮಯ್ಯ ಪ್ರಶ್ನಾತೀತ ನಾಯಕ. ಸಿದ್ದರಾಮಯ್ಯರದ್ದು ಟೈಗರ್ ಫೇಸ್. ಟೆಂಡರ್ ಹಾರ್ಟ್. ಇಷ್ಟು ವರ್ಷ ಒಂದು ದೂರು ಇಲ್ಲದೆ, ಕಪ್ಪು ಚುಕ್ಕೆ ಇಲ್ಲದೆ ಪರಿಶುದ್ಧ ರಾಜಕೀಯ ಜೀವನವನ್ನು ಸಿದ್ದರಾಮಯ್ಯ ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡರು.
ಸಿಎಂ ಸಿದ್ದರಾಮಯ್ಯ ಮಾತನಾಡಿ, ಮೈಸೂರು ವಿವಿಯಲ್ಲಿ ನಿವೃತ್ತಿ ವೇತನ ಕೊಡಲು ಹಣ ಇಲ್ಲ. ವಿವಿ ಈ ದುಸ್ಥಿತಿ ತಲುಪಿದೆ. ವಿವಿ ಈ ದುಸ್ಥಿತಿ ತಲುಪಲು ವಿವಿಯ ಹಿಂದಿನ ಕುಲಪತಿಗಳು ಕಾರಣ. ಮೈಸೂರು ವಿವಿ ಗೆ ಬಂದಿರುವ ಈ ದುಸ್ಥಿತಿಯನ್ನು ಸರಿಪಡಿಸುತ್ತೇವೆ. ನಿವೃತ್ತಿ ವೇತನ ಕೊಡಲು ಸರ್ಕಾರದಿಂದ ಹಣ ಬಿಡುಗಡೆ ಮಾಡಿದ್ದೇನೆ. ಮೈಸೂರು ವಿವಿ ವಿಚಾರದಲ್ಲಿ ನಾನು ವಿಶೇಷ ಗಮನ ಕೊಡುತ್ತೇನೆ. ರಾಜ್ಯದಲ್ಲಿ ಬ್ಯಾಕ್ ಲ್ಯಾಗ್ ಹುದ್ದೆ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.



