ಬೆಳಗಾವಿ : ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆಯ ಬಗ್ಗೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ನಲ್ಲಿ ಅಧಿಕಾರ ಹಂಚಿಕೆ ಸಂಬಂಧ ಒಪ್ಪಂದ ಆಗಿರುವುದು ನಿಜ. ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಕಾಂತ್ರಿ ನಡೆಯುತ್ತದೆ ಎಂದು ಹೇಳಿ ಒಬ್ಬರು ಸಚಿವರು ಇದೀಗ ಮನೆಯಲ್ಲಿ ಕುಳಿತುಕೊಂಡಿದ್ದಾರೆ. ಈಗ ಮತ್ತೆ ಜಗಳ ಆರಂಭವಾಗಿದೆ. ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡಲ್ಲ, ಡಿಕೆಶಿ ಹಠ ಬಿಡುತ್ತಿಲ್ಲ ಎಂದು ಅಶೋಕ್ ತಿಳಿಸಿದರು.
ಕಾಂಗ್ರೆಸ್ ಜಗಳದಲ್ಲಿ ಸರ್ಕಾರ ಪತನವಾದ್ರೆ ನಾವೇನೂ ಸರ್ಕಾರ ಮಾಡಲ್ಲ. ನಾವು ಚುನಾವಣೆಗೆ ಹೋಗಲು ಸಿದ್ದರಿದ್ದೇವೆ. ಕಾಂಗ್ರೆಸ್ ಶಾಸಕರೇ ಅನುದಾನ ಬಂದಿಲ್ಲ ಎಂದು ಹೇಳುತ್ತಿದ್ದಾರೆ. ಬೆಂಗಳೂರಿನಲ್ಲಿ ಗುಂಡಿ ಇಲ್ಲದ ರಸ್ತೆ ತೋರಿಸಿದ್ರೆ ಬಹುಮಾನ ಕೊಡಬಹುದು ಎಂದು ಕಾಲೆಳೆದಿದ್ದಾರೆ.
ದಸರಾ ಹಬ್ಬ ಮನೆಯಲ್ಲಿ ಆಚರಣೆ ಮಾಡಲು ಆಗದೇ ಬೀದಿಯಲ್ಲಿ ಸಂತ್ರಸ್ತರು ನಿಂತಿದ್ದಾರೆ. ರಾಜ್ಯ ಸರ್ಕಾರ ಕುಂಭ ಕರ್ಣ ನಿದ್ದೆಯಲ್ಲಿದೆ. ಸಿಎಂ ಸಿದ್ದರಾಮಯ್ಯ ಗ್ಯಾಂಗ್‌ಗೆ ಜನರ ಹಿತಾಸಕ್ತಿಯ ಬದಲು ಜಾತಿ ಸಮೀಕ್ಷೆ ಮಾತ್ರ ಮುಖ್ಯವಾಗಿದೆ. ಜಾತಿಗಳ ಮಧ್ಯೆ ಬೆಂಕಿ ಹಚ್ಚುವುದೇ ಸಿದ್ದರಾಮಯ್ಯನ ಕಾಯಕವಾಗಿದೆ. ಸಿದ್ದರಾಮಯ್ಯ ಬೆಂಕಿ ಹಚ್ಚುವ ಸಿಎಂ ಎಂದು ಕಿಡಿಕಾರಿದ್ದಾರೆ.
ಬೆಟ್ಟ ಕುಸಿತದಿಂದ ಹಾಸನದಲ್ಲಿ ವ್ಯಾಪಕವಾಗಿ ಹಾನಿ ಆಗಿದೆ. ಕೇಂದ್ರ ಸರ್ಕಾರ ನೆರವಿಗೆ ಬರಬೇಕು ಎನ್ನುವ ಡೈಲಾಗ್ ಅನ್ನು ಸಿಎಂ ಹೊಡೆಯುತ್ತಲೇ ಇದ್ದಾರೆ. ಕಳೆದ ಅನೇಕ ವರ್ಷಗಳಿಂದ ಇದೇ ಡೈಲಾಗ್ ಹೊಡೆಯುತ್ತಿದ್ದಾರೆ. ಅದರ ಬದಲು ಕೆಲಸ ಮಾಡಿಸಿದ್ದರೆ ಕಾಮಗಾರಿ ಪೂರ್ತಿ ಆಗುತ್ತಿತ್ತು ಎಂದು ಆಕ್ರೋಶ ಹೊರಹಾಕಿದರು.
ಕೇಂದ್ರ ಗೃಹ ಸಚಿವ, ಕೃಷಿ ಸಚಿವರನ್ನು ರಾಜ್ಯದ ನಾಯಕರು ಈವರೆಗೆ ಭೇಟಿ ಮಾಡಿಲ್ಲ. ಸಿಎಂ, ಸಚಿವರು ಬೇಜವಾಬ್ದಾರಿಯಿಂದ ಕಾಲ ಕಳೆಯುತ್ತಿದ್ದಾರೆ. ಪ್ರವಾಹದಿಂದ ಏಷ್ಟು ಮನೆಗಳು ಹಾನಿಯಾಗಿದೆ ಎಂಬ ಬಗ್ಗೆ ಸಿಎಂ ಬಾಯಿಯಿಂದ ಬಂದಿಲ್ಲ. ಅದು ಬಿಟ್ಟು ನಾನೇ ಸಿಎಂ ಆಗಿ ಮುಂದುವರೆಯುತ್ತೇನೆಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಯಾವಾಗ ಇಳಿತೀರಾ ಎಂದು ಅಲ್ಲಿನ ನಾಯಕರು ಕೇಳುತ್ತಿದ್ದಾರೆ ಅಶೋಕ್ ತಿಳಿಸಿದರು.