Friday, April 3, 2026
Google search engine

Homeರಾಜಕೀಯಸಿದ್ದರಾಮಯ್ಯನವರ ಸರ್ಕಾರ ಹುಟ್ಟಿದ್ದೇ ಸುಳ್ಳಿನಿಂದ : ಮಾಜಿ ಸಚಿವ ಬಿ.ಶ್ರೀರಾಮುಲು

ಸಿದ್ದರಾಮಯ್ಯನವರ ಸರ್ಕಾರ ಹುಟ್ಟಿದ್ದೇ ಸುಳ್ಳಿನಿಂದ : ಮಾಜಿ ಸಚಿವ ಬಿ.ಶ್ರೀರಾಮುಲು

ದಾವಣಗೆರೆ : ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಗ್ಯಾರಂಟಿ ನಿಲ್ಲಿಸುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದು, ರಾಜ್ಯದಲ್ಲಿ ಅಧಿಕಾರದಲ್ಲಿ ಇರುವುದು ಕಾಂಗ್ರೆಸ್ಸೇ ಹೊರತು ಬಿಜೆಪಿ ಸರ್ಕಾರವಲ್ಲ. ಗ್ಯಾರಂಟಿಗಳನ್ನು ನಿಲ್ಲಿಸಿದರೆ ಸಿದ್ದರಾಮಯ್ಯನವರೇ ನಿಲ್ಲಿಸಬೇಕು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ಸಿಗೆ ಸೋಲಿನ ಭೀತಿ ಮತ್ತು ಭಯ ಆರಂಭವಾಗಿದೆ. ಸಿದ್ದರಾಮಯ್ಯನವರ ಸರ್ಕಾರ ಹುಟ್ಟಿದ್ದೇ ಸುಳ್ಳಿನಿಂದ. ಅದಕ್ಕೆ ಈಗಲೂ ಸಿದ್ದರಾಮಯ್ಯ ಸುಳ್ಳುಗಳನ್ನೇ ಹೇಳುತ್ತಿದ್ದಾರೆ ಎಂದರು.

ಕಾಂಗ್ರೆಸ್ಸಿನವರು ಮೊದಲಿನಿಂದಲೇ ಜನರು ದಡ್ಡರು ಅಂತಾ ತಿಳಿದಿದ್ದಾರೆ. ಆದರೆ, ಈಗ ಎರಡೂ ಕಡೆ ಸೋಲುತ್ತೇವೆ ಎಂಬುದನ್ನು ಸ್ವತಃ ಕಾಂಗ್ರೆಸ್ಸಿಗರೇ ಮನವರಿಕೆ ಮಾಡಿಕೊಂಡಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ನಮ್ಮ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಟಿ.ದಾಸಕರಿಯಪ್ಪ ಪರವಾಗಿ ನಾವೆಲ್ಲರೂ ಒಂದಾಗಿ ಕೆಲಸ ಮಾಡುತ್ತಿದ್ದೇವೆ. ನಾವು ಒಂದಾಗಿರುವುದೂ ಕಾಂಗ್ರೆಸ್ಸಿಗರಲ್ಲಿ ಸೋಲಿನ ಭೀತಿಯನ್ನು ಹುಟ್ಟುಹಾಕಿದೆ ಎಂದು ಟೀಕಿಸಿದರು.

ಇನ್ನೂ ಬಜೆಟ್ ಆದ ನಂತರ ಸಿದ್ದರಾಮಯ್ಯ ಅವರಿಗೆ ಡಿಸಿಎಂ ಡಿ.ಕೆ.ಶಿವಕುಮಾರಗೆ ಕಂಡರೂ ಭಯ ಶುರುವಾಗಿದ್ದು, ಉಪ ಚುನಾವಣೆ ಘೋಷಣೆಯಾದ ನಂತರ ಬಿಜೆಪಿ ಕಂಡರೂ ಭಯಪಡುತ್ತಿದ್ದಾರೆ. 2018ರ ಚುನಾವಣೆ ವೇಳೆ ದಲಿತ ನಾಯಕ ಡಾ.ಜಿ.ಪರಮೇಶ್ವರರನ್ನು ಮುಖ್ಯಮಂತ್ರಿ ಮಾಡಬೇಕೆಂಬ ಚರ್ಚೆಯಾಗಿತ್ತು. ಆಗ ಸಿದ್ದರಾಮಯ್ಯನವರು ಡಾ.ಪರಮೇಶ್ವರರನ್ನು ಚುನಾವಣೆಯಲ್ಲಿ ಸೋಲಿಸಿದರು. ಈಗ ಕಾಲ ಬದಲಾಗಿದ್ದು, ಅಹಿಂದ ಹೆಸರು ಹೇಳಿಕೊಂಡು ತಮ್ಮ ಬೇಳೆಯನ್ನು ಸಿದ್ದರಾಮಯ್ಯ ಬೇಯಿಸಿಕೊಳ್ಳುತ್ತಿದ್ದಾರೆ. ಅಧಿಕಾರ ಹಂಚಿಕೆ ಮಾಡುವಾಗಲಂತೂ ಅಹಿಂದ ವರ್ಗ ನೆನಪಾಗಲಿಲ್ಲ. ಆಗ ತಮಗೆ ಬೇಕಾದವರಿಗೆ ಮಾತ್ರ ಅಧಿಕಾರ ನೀಡಿದರು ಎಂದು ಕುಟುಕಿದರು.

ಬಿಜೆಪಿಯನ್ನು ಸಿದ್ದರಾಮಯ್ಯ ಕಳ್ಳ ಎತ್ತುಗಳಿಗೆ ಹೋಲಿಕೆ ಮಾಡಿದ್ದಾರೆ. ಗೋಮಾತೆಗೆ ಹೋಲಿಸಿದ್ದಕ್ಕೆ ಸಿಎಂಗೆ ಧನ್ಯವಾದಗಳನ್ನು ಹೇಳುತ್ತೇನೆ. ದನಕರುಗಳು ಮೇವು ಸಿಕ್ಕರೆ ಎಷ್ಟು ಬೇಕೋ ಅಷ್ಟನ್ನೇ ಮಾತ್ರ ತಿಂದು, ಮರಳಿ ಮನೆಯ ಕೊಟ್ಟಿಗೆಗೆ ಹೋಗುತ್ತವೆ. ಆದರೆ, ಸಿದ್ದರಾಮಯ್ಯ ಸರ್ಕಾರದ ಮಂತ್ರಿಗಳು ರಾಜ್ಯದ ಖಜಾನೆಯನ್ನೇ ಲೂಟಿ ಮಾಡುತ್ತಿದ್ದಾರೆ.

ಇನ್ನೂ 5ರಿಂದ 10 ತಲೆಮಾರಿಗಾಗುವಷ್ಟು ಹಣ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದ ಬೊಕ್ಕಸವನ್ನೇ ಕಾಂಗ್ರೆಸ್ಸಿಗರು ಖಾಲಿ ಮಾಡಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮ, ಪರಿಶಿಷ್ಟರ ಅಭಿವೃದ್ಧಿ ನಿಗಮ ಹೀಗೆ ಎಲ್ಲಾ ಕಡೆ ಭ್ರಷ್ಟಾಚಾರ ಮಾಡುತ್ತಿದ್ದಾರೆ. ಹೀಗೆ ಲೂಟಿ ಮಾಡಿದ ಹಣವನ್ನು ಬೇರೆ ರಾಜ್ಯಗಳ ವಿಧಾನಸಭೆ ಚುನಾವಣೆ, ಲೋಕಸಭೆ ಚುನಾವಣೆಗೆ ಬಳಸಿದರು ಎಂದು ಆರೋಪಿಸಿದರು.

ಅಲ್ಲದೆ ನಾವು ಬಿಜೆಪಿಯವರು ಎತ್ತುಗಳಾದರೆ, ಕಾಂಗ್ರೆಸ್ಸಿನವರು ಹೆಗ್ಗಣಗಳಿದ್ದಂತೆ. ಸಿದ್ದರಾಮಯ್ಯ ಮತ್ತವರ ಸುತ್ತಲೂ ದೊಡ್ಡ ದೊಡ್ಡ ಹೆಗ್ಗಣಗಳೇ ಇವೆ. ಇಂತಹವರು ಈಗಾಗಲೇ ಜನರ ವಿಶ್ವಾಸವನ್ನೇ ಕಳೆದುಕೊಂಡಿದ್ದಾರೆ. ಸಿದ್ದರಾಮಯ್ಯನವರಿಗೆ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿಗೆ ಬೈಯ್ಯುವುದನ್ನು ಬಿಟ್ಟರೆ, ಬೇರೇನೂ ಗೊತ್ತಿಲ್ಲ. ಯಾವುದೇ ಹೊಸ ವಿಚಾರವೂ ಇಲ್ಲ. ಆದರೆ, ಸಿದ್ದರಾಮಯ್ಯ ಸರ್ಕಾರ ಏನೂ ಮಾಡಿಲ್ಲವೆಂಬುದು ರಾಜ್ಯದ ಪ್ರತಿಯೊಬ್ಬರಿಗೂ ಗೊತ್ತಿದೆ.

ಸದ್ಯ ಕಾಂಗ್ರೆಸ್ ಸರ್ಕಾರ ಐ.ಸಿ.ಯು.ನಲ್ಲಿದ್ದು, ಸುಳ್ಳಿನ ವೆಂಟಿಲೇಟರ್ ಮೇಲೆ ಈ ಸರ್ಕಾರದ ಜೀವ ನಿಂತಿದೆ. ಸುಳ್ಳಿನ ವೆಂಟಿಲೇಟರ್ ತೆಗೆದರೆ, ಕಾಂಗ್ರೆಸ್ ಸರ್ಕಾರದ ಕತೆ ಮುಗಿದಂತೆ ಎಂದು ಶ್ರೀರಾಮುಲು ಭವಿಷ್ಯ ನುಡಿದಿದ್ದಾರೆ.

ಈ ಸಂದರ್ಭದಲ್ಲಿ ಹರಿಹರ ಶಾಸಕ ಬಿ.ಪಿ.ಹರೀಶ, ವಿಪ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿ ಸ್ವಾಮಿ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಎಂ.ಬಸವರಾಜ ನಾಯ್ಕ, ಲೋಕಿಕೆರೆ ನಾಗರಾಜ, ಮಾಡಾಳ ಮಲ್ಲಿಕಾರ್ಜುನ, ಆರ್.ಎಲ್.ಶಿವಪ್ರಕಾಶ, ಶಿವರಾಜ ಪಾಟೀಲ, ಬಿ.ಎಸ್.ಜಗದೀಶ, ಎಚ್.ಪಿ.ವಿಶ್ವಾಸ ಇತರರು ಇದ್ದರು.

RELATED ARTICLES
- Advertisment -
Google search engine

Most Popular