ಬೆಂಗಳೂರು: ರಾಜ್ಯದಲ್ಲಿ ಸದ್ಯಕ್ಕೆ ಅಹಿಂದ, ಹಿಂದುಳಿದ ವರ್ಗಗಳ ನಾಯಕ ಅಂದರೆ ಅದು ಸಿದ್ದರಾಮಯ್ಯ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಈಗ ಸಿದ್ದರಾಮಯ್ಯ ಅವರಿಗೆ ಟಕ್ಕರ್ ಕೊಡಲು ಅತಿ ಹಿಂದುಳಿದ ವರ್ಗಗಳ ಒಕ್ಕೂಟ ಮುಂದಾಗಿದ್ದು, ಡಿಕೆ.ಶಿವಕುಮಾರ್ ನೇತೃತ್ವದಲ್ಲಿ ಸಮಾವೇಶ ನಡೆಸಲು ಮುಂದಾಗಿದೆ ಎಂದು ತಿಳಿದುಬಂದಿದೆ.
ಅತಿ ಹಿಂದುಳಿದ ವರ್ಗಗಳ 11 ಸ್ವಾಮೀಜಿಗಳ ಒಕ್ಕೂಟ ಪ್ರಣವಾನಂದ ಸ್ವಾಮೀಜಿ ನೇತೃತ್ವದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಶುಕ್ರವಾರ ಭೇಟಿ ಮಾಡಿದ್ದು, ಬೆಂಗಳೂರಿನಲ್ಲಿ ಅತಿ ಹಿಂದುಳಿದವರ ಸಮಾವೇಶ ನಡೆಸುವಂತೆ ಒತ್ತಾಯಿಸಿದ್ದಾರೆಂದು ತಿಳಿಸಿದ್ದಾರೆ. ಅಲ್ಲದೇ ನೀವೂ ಮುಂದೆ ಸಿಎಂ ಆಗಲೇಬೇಕೆಂದು ಹಾಗೂ ಬೆಂಗಳೂರಿನಲ್ಲಿ ಅತಿ ಹಿಂದುಳಿದವರ ಸಮಾವೇಶ ಮಾಡುಬೇಕು ಎಂದು ಒತ್ತಾಯಿಸಿದ್ದಾರೆ.
ಡಿಕೆ.ಶಿವಕುಮಾರ್ ಭೇಟಿ ಬಳಿಕ ಪ್ರತಿಕ್ರಿಯೆ ನೀಡಿದ ಪ್ರಣವಾನಂದ ಸ್ವಾಮೀಜಿ, ರಾಜ್ಯದ ಮುಖ್ಯಮಂತ್ರಿ ಆಗಲು ಡಿಕೆಶಿ ಯೋಗ್ಯ ವ್ಯಕ್ತಿ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಲು ತಡಮಾಡಬಾರದು. ನಮ್ಮೆಲ್ಲರ ಸಂಪೂರ್ಣ ಬೆಂಬಲ ಅವರಿಗಿದೆ. ಡಿಕೆಶಿ ಸಿಎಂ ಆಗಬೇಕೆಂಬ ಬೇಡಿಕೆ ಇದ್ದು, ಅವರಿಗೆ ಯೋಗ್ಯತೆ ಮತ್ತು ಹಕ್ಕು ಎರಡೂ ಇದೆ. ದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರೋದೇ ಎರಡು ಮೂರು ರಾಜ್ಯಗಳಲ್ಲಿ ಹೀಗಾಗಿ ಕೊಟ್ಟ ಮಾತಿನಂತೆ ಹೈಕಮಾಂಡ್ ನಡೆದುಕೊಳ್ಳಬೇಕು. ಅತಿ ಹಿಂದುಳಿದ ಸಮುದಾಯಗಳಿಗೆ ಅನ್ಯಾಯವಾಗಿದ್ದು, ಯಾವ ಮುಖ್ಯಮಂತ್ರಿಗಳೂ ನಮ್ಮ ಪರ ಕೆಲಸ ಮಾಡಿಲ್ಲ. ಹೀಗಾಗಿ ನಾವು ಅನಿವಾರ್ಯವಾಗಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದೇವೆ. ಡಿಕೆ ಶಿವಕುಮಾರ್ ಕಷ್ಟ, ನೋವು ಪಟ್ಟಿದ್ದಾರೆ. ಪಕ್ಷಕ್ಕಾಗಿ ಜೈಲಿಗೂ ಹೋಗಿ ಬಂದಿದ್ದಾರೆ. ಅವರು ಸಿಎಂ ಆಗಲೇಬೇಕು ಎಂದು ಆಗ್ರಹಿಸಿದ್ದಾರೆ.
ಈ ನಡುವೆ ಸ್ವಾಮೀಜಿಗಳ ಭೇಟಿ ಕುರಿತು ಪ್ರತಿಕ್ರಿಯಿಸಿದ ಡಿ.ಕೆ.ಶಿ, ಸ್ವಾಮೀಜಿಗಳು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದು, ಅವರು ಬೆಂಗಳೂರಿಗೆ ಬಂದಾಗ ಉಳಿದುಕೊಳ್ಳಲು ಜಾಗ ಇಲ್ಲ. ನಮಗೆ ಏನಾದರೂ ಮಾಡಿ ಜಾಗ ಕೊಡಿ ಎಂದು ಕೇಳಿದ್ದಾರೆ. ಸಿಎ ನಿವೇಶನ ಪರಿಶೀಲಿಸಿ ಅವರಿಗೆ ಜಾಗ ಕಲ್ಪಿಸುವ ಕೆಲಸ ಮಾಡುತ್ತೇನೆ. ಅವರ ಬೇಡಿಕೆ ನ್ಯಾಯಬದ್ಧವಾಗಿದ್ದು, ಹಿಂದುಳಿದ ವರ್ಗದ ಸ್ವಾಮೀಜಿಗಳ ಬೇಡಿಕೆ ಪರಿಗಣಿಸಲಾಗಿದೆ ಎಂದು ಹೇಳಿದರು.
ಈ ವೇಳೆ ನಿಮ್ಮನ್ನು ಸಿಎಂ ಸ್ಥಾನದಲ್ಲಿ ನೋಡಬೇಕು ಎಂಬ ಆಸೆ ವ್ಯಕ್ತಪಡಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿ, ನಾನು ಅವರ ಪ್ರೀತಿ ಬಗ್ಗೆ ಏನು ಪ್ರತಿಕ್ರಿಯೆ ನೀಡಲು ಆಗುವುದಿಲ್ಲ. ಅವರ ಆಸೆ ಅವರು ವ್ಯಕ್ತಪಡಿಸಬಹುದು. ಆದರೆ ಏನೇ ತೀರ್ಮಾನ ಇದ್ದರೂ ಪಕ್ಷ ಕೈಗೊಳ್ಳುತ್ತದೆ ಎಂದು ನಾನು ಹಾಗೂ ಸಿಎಂ ಇಬ್ಬರೂ ಹೇಳಿದ್ದು, ನಾವು ಅದಕ್ಕೆ ಬದ್ಧವಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.



