ಬೆಂಗಳೂರು : ಖ್ಯಾತ ಸಂಗೀತ ನಿರ್ದೇಶಕ, ಗಾಯಕ ರಘು ದೀಕ್ಷಿತ್ ಹೊಸ ಅಧ್ಯಾಯಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಗಾಯಕಿ, ಕೊಳಲು ವಾದಕಿ ವಾರಿಜಶ್ರೀ ಜೊತೆ ಸಂಸಾರದ ಸರಿಗಮ ಹಾಡಲು ಸಿದ್ಧರಾಗಿದ್ದಾರೆ.
ಇವರಿಗೆ ಇದು ಎರಡನೇ ವಿವಾಹ. ಹಿಂದೆ ಶಾಸ್ತ್ರೀಯ ನೃತ್ಯಗಾರ್ತಿ ಮಯೂರಿ ಜೊತೆ ರಘು ಧೀಕ್ಷಿತ್ ವಿವಾಹ ಮುರಿದುಬಿದ್ದಿತ್ತು. ಇದೀಗ ಗ್ರ್ಯಾಂಮಿ-ನಾಮನಿರ್ದೇಶಿತ ಖ್ಯಾತ ಗಾಯಕಿ ವಾರಿಜಶ್ರೀ ವೇಣುಗೋಪಾಲ್ ಜೊತೆ ಹೊಸ ಬಾಳಿಗೆ ಹೆಜ್ಜೆ ಹಾಕಲು ರಘು ದೀಕ್ಷಿತ್ ಸಿದ್ಧರಾಗಿದ್ದಾರೆ.
ರಘು ದೀಕ್ಷಿತ್ ಹಾಗೂ ವಾರಿಜಶ್ರೀ ಹಲವು ಆಲ್ಬಂಗಳಲ್ಲಿ ಜೊತೆಯಾಗಿ ಹಾಡಿದ್ದು, ಒಬ್ಬರಿಗೊಬ್ಬರು ಪರಸ್ಪರ ಪರಿಚಿತರು. ಅನೇಕ ವರ್ಷಗಳಿಂದ ಪರಸ್ಪರ ಬಲ್ಲವರಾಗಿದ್ದು, ಇದೀಗ ಜಂಟಿಯಾಗಿ ಬಾಳ್ವೆ ಮಾಡಲು ಸಿದ್ಧರಾಗಿದ್ದಾರೆ. `ಸಾಕು ಇನ್ನು ಸಾಕು’ ಆಲ್ಬಂ ಸಂಗೀತ ಸಹಯೋಗವೇ ಇವರ ಪ್ರೀತಿಗೆ ಸೇತುವೆಯಾಗಿದೆಯಂತೆ. ಇದೇ ತಿಂಗಳು ಕೊನೆಯಲ್ಲಿ ಮದುವೆ ನಿಶ್ಚಯವಾಗಿದೆ. ಶೀಘ್ರದಲ್ಲೇ ಮದುವೆ ಕೂಡ ನಡೆಯಲಿದೆ ಎಂದು ತಿಳಿದು ಬಂದಿದೆ.