ಚಾಮರಾಜನಗರ : ಶಾಶ್ವತ ನಿವಾಸಿ ಪ್ರಮಾಣಪತ್ರ ವಿತರಣೆಯ ಮೂಲಕ ಎಸ್‌ಐಆರ್ (Special Intensive Revision) ಪ್ರಕ್ರಿಯೆಯನ್ನೇ ಕಾಂಗ್ರೆಸ್ ಸರ್ಕಾರ ದುರ್ಬಳಕೆ ಮಾಡುತ್ತಿದೆ ಎಂದು ಆರೋಪಿಸಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಈ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಐಆರ್‌ನ ಉದ್ದೇಶ ಭಾರತೀಯ ನಾಗರಿಕರಿಗೆ ಮಾತ್ರ ಮತದಾನದ ಹಕ್ಕು ಖಚಿತಪಡಿಸುವುದಾಗಿದೆ. ಆದರೆ ರಾಜ್ಯ ಸರ್ಕಾರ ಶಾಶ್ವತ ನಿವಾಸಿ ಪ್ರಮಾಣಪತ್ರಗಳನ್ನು ನೀಡುವ ಮೂಲಕ ಈ ಪ್ರಕ್ರಿಯೆಯನ್ನು ದಿಕ್ಕುತಪ್ಪಿಸುತ್ತಿದೆ ಎಂದು ಆರೋಪಿಸಿದರು.
ಇನ್ನೂ ಪೌರತ್ವ ನೀಡುವ ಅಧಿಕಾರ ಕೇಂದ್ರ ಸರ್ಕಾರಕ್ಕಷ್ಟೇ ಇದ್ದು, ಅಕ್ರಮ ವಲಸಿಗರಿಗೆ ಯಾವುದೇ ರೀತಿಯ ಪ್ರಮಾಣಪತ್ರ ನೀಡಿದರೆ ಅವರನ್ನು ಬಳಿಕ ವಾಪಸ್ ಕಳುಹಿಸುವುದು ಕಷ್ಟವಾಗಲಿದೆ ಎಂದು ಅವರು ಹೇಳಿದರು. ದೇಶದಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರ ಸಮಸ್ಯೆ ಗಂಭೀರವಾಗಿದ್ದು, ಅಲ್ಪಸಂಖ್ಯಾತರ ಓಲೈಕೆ ರಾಜಕಾರಣಕ್ಕಾಗಿ ಸರ್ಕಾರ ಈ ಕ್ರಮ ಕೈಗೊಳ್ಳುತ್ತಿದೆ ಎಂದು ಟೀಕಿಸಿದರು.
ಇದೇ ವೇಳೆ ಬರ ಪರಿಸ್ಥಿತಿ ಕುರಿತು ರಾಜ್ಯ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ ಅಶೋಕ್, ಮೊದಲು ಬರ ಸಮೀಕ್ಷೆ ನಡೆಸಿ ಬರಪೀಡಿತ ಪ್ರದೇಶಗಳನ್ನು ಘೋಷಿಸಬೇಕಿತ್ತು. ಅದನ್ನು ಬಿಟ್ಟು ಕೇಂದ್ರ ಸರ್ಕಾರದಿಂದ ₹10 ಸಾವಿರ ಕೋಟಿ ಪರಿಹಾರ ಕೇಳುವುದು ಜವಾಬ್ದಾರಿಯುತ ಆಡಳಿತವಲ್ಲ ಎಂದರು. ಎಸ್‌ಡಿಆರ್‌ಎಫ್ ಅನುದಾನದ ಬಳಕೆ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಟೀಕಿಸಿದ ಅವರು, ದೇವಸ್ಥಾನಗಳಿಗೆ ಭೇಟಿ ನೀಡುವುದಕ್ಕಿಂತ ಮಳೆ ಕೊರತೆಯಿಂದ ಸಂಕಷ್ಟದಲ್ಲಿರುವ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು. ಕೆಆರ್‌ಎಸ್ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು ಸಿಗದಿರುವುದು, ರಸ್ತೆಗಳ ದುಸ್ಥಿತಿ ಹಾಗೂ ರೈತರ ಸಮಸ್ಯೆಗಳ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಜಾರಿಯಲ್ಲೂ ವಿಫಲವಾಗಿದೆ ಎಂದು ಆರೋಪಿಸಿದ ಅಶೋಕ್, ಗೃಹಲಕ್ಷ್ಮಿ, ಯುವನಿಧಿ ಸೇರಿದಂತೆ ಹಲವು ಯೋಜನೆಗಳ ಬಾಕಿ ಹಣ ಇನ್ನೂ ಫಲಾನುಭವಿಗಳಿಗೆ ತಲುಪಿಲ್ಲ. ರೇಷನ್ ಕಾರ್ಡ್ ರದ್ದು, ಪಿಂಚಣಿ ಸ್ಥಗಿತ ಸೇರಿದಂತೆ ಹಲವು ವಿಚಾರಗಳಲ್ಲಿ ಸರ್ಕಾರ ಜನರಿಗೆ ಅನ್ಯಾಯ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.



