ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ತಮ್ಮ ಸಹೋದರಿಯ ಪುತ್ರ ಮಹೇಂದ್ರ ಹೆಸರಿನಲ್ಲಿ ದೇವನೂರು ಗ್ರಾಮದ ಸರ್ವೆ ನಂ.೮೧/೨ ರಲ್ಲಿ ೨.೨೨ ಎಕರೆ ಜಮೀನನ್ನು ಖರೀದಿಸಿ, ಅದಕ್ಕೆ ಪರಿಹಾರ ನೀಡಿಲ್ಲ ಎಂದು ಮುಡಾದಿಂದ ೫೦:೫೦ ಅನುಪಾತದಲ್ಲಿ ಅಕ್ರಮವಾಗಿ ೧೯ ನಿವೇಶನಗಳನ್ನು ಪಡೆದಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಮಂಗಳವಾರ ಇಲ್ಲಿನ ಲೋಕಾಯುಕ್ತ ಎಸ್.ಪಿ. ಅವರಿಗೆ ದೂರು ನೀಡಿದ್ದಾರೆ.
ದೂರಿನೊಂದಿಗೆ ಜಮೀನಿಗೆ ಸಂಬಂಧಿಸಿದ ಕೆಲವು ದಾಖಲೆಗಳು ಹಾಗೂ ಕೆಲವು ಫೋಟೊಗಳನ್ನು ಅವರು ಸಾಕ್ಷ್ಯವಾಗಿ ನೀಡಿದ್ದಾರೆ. ೨.೨೨ ಎಕರೆ ಜಮೀನು ಮಹೇಂದ್ರ ಅವರ ಹೆಸರಿಗೆ ನೋಂದಣಿಯಾಗಿದೆ. ಅದರಲ್ಲಿ ಮನೆಗಳಿರುವುದು ಗಮನಕ್ಕೆ ಬಂದಿದ್ದರೂ ಕೃಷಿ ಭೂಮಿ ಎಂದು ಅಧಿಕಾರಿಗಳು ಖಾತೆ ಮಾಡಲು ಆದೇಶಿಸಿದ್ದಾರೆ. ನಂತರ ಈ ದಾಖಲೆಗಳನ್ನು ಆಧರಿಸಿ ಮುಡಾದಲ್ಲಿ ಮಹೇಂದ್ರ ಅವರ ಹೆಸರಿಗೆ ಶೇ ೫೦: ೫೦ ಅನುಪಾತದಲ್ಲಿ ಬದಲಿ ನಿವೇಶನಗಳನ್ನು ಪಡೆದಿದ್ದಾರೆ ಎಂದು ಕೃಷ್ಣ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಜಾಗ ಮುಡಾ ಬಡಾವಣೆಯಾಗಿದ್ದು, ಅಲ್ಲಿ ನಿವೇಶನದಾರರು ೨೦ ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸವಿದ್ದಾರೆ ಎಂದು ತಿಳಿದಿದ್ದರೂ, ೨೦೨೦ರ ಸೆ. ೨೩ರಂದು ಮೈಸೂರಿನ ಅಂದಿನ ತಹಶೀಲ್ದಾರ್ ಕೆ.ಆರ್. ರಕ್ಷಿತ್ ಅವರು ಕೃಷಿ ಭೂಮಿ ಎಂದು ಖಾತೆ ಮಾಡಲು ಆದೇಶ ಹೊರಡಿಸಿ ಲೋಪ ಎಸಗಿದ್ದಾರೆ. ಅಕ್ರಮಕ್ಕೆ ಸಹಕರಿಸಿರುವ ಮುಡಾ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ಅವರು ದೂರಿನಲ್ಲಿ ಕೋರಿದ್ದಾರೆ.