ವರದಿ: ಸತೀಶ್ ಆರಾಧ್ಯ
ಪಿರಿಯಾಪಟ್ಟಣ: ವಿದ್ಯಾರ್ಥಿಗಳಿಗೆ ಸಾಮಾಜಿಕ ಅರಿವು ಮೂಡಿಸುವ ಉದ್ದೇಶದಿಂದ ರೋಟರಿ ಸಂಸ್ಥೆಯಿಂದ ಇಂಟ್ರಾಕ್ಟ್ ಕ್ಲಬ್ ಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ರೋಟರಿ ವಲಯ 6 ರ ಸಹಾಯಕ ಗವರ್ನರ್ ತಿರುಮಲಾಪುರ ರಾಜೇಗೌಡ ತಿಳಿಸಿದರು.

ಪಿರಿಯಾಪಟ್ಟಣ ತಾಲೂಕಿನ ಕೋಮಲಾಪುರ ಗ್ರಾಮದ ಶ್ರೀರಾಮ ಪ್ರೌಢಶಾಲೆಯಲ್ಲಿ ರೋಟರಿ ಇಂಟ್ರಾಕ್ಟ್ ಕ್ಲಬ್ ಪ್ರಾರಂಭಿಸಿ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿ ಅವರು ಮಾತನಾಡಿದರು, ವಿದ್ಯಾರ್ಥಿ ಜೀವನದಿಂದ ನಾಯಕತ್ವ ಗುಣ ಮೈಗೂಡಿಸಿಕೊಳ್ಳುವ ಉದ್ದೇಶ ಹಾಗೂ ಸಾಮಾಜಿಕ ಜವಾಬ್ದಾರಿಯಿಂದ ಸಮಾಜದ ಅಭಿವೃದ್ಧಿಗೆ ತನ್ನ ಕೈಲಾದ ಕೊಡುಗೆ ನೀಡುವ ಹಾಗೂ ತನ್ನ ಸುತ್ತಮುತ್ತ ನಡೆಯುತ್ತಿರುವ ತಪ್ಪುಗಳನ್ನು ತಿದ್ದುವ ಉದ್ದೇಶದಿಂದ ರೋಟರಿ ಸಂಸ್ಥೆಯಿಂದ ಶಾಲಾ ಕಾಲೇಜುಗಳಲ್ಲಿ ಇಂಟ್ರಾಕ್ಟ್ ಕ್ಲಬ್ ಪ್ರಾರಂಬಿಸಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುತ್ತಿದೆ ಎಂದರು.
ರೋಟರಿ ಮಿಡ್ ಟೌನ್ ಪಿರಿಯಾಪಟ್ಟಣ ಅಧ್ಯಕ್ಷ ಜಗನ್ ಗೌಡ ಮಾತನಾಡಿ ಸಾಮಾಜಿಕ ಸೇವೆಗೆ ವಿಶ್ವದಲ್ಲಿಯೇ ಹೆಸರಾದ ರೋಟರಿ ಸಂಸ್ಥೆಯ ಕಾರ್ಯವೈಕರಿಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಉದ್ದೇಶ ಹಾಗೂ ಶಿಕ್ಷಣದ ಜೊತೆ ಸಮಾಜದ ಅಭಿವೃದ್ಧಿಗೆ ವಿದ್ಯಾರ್ಥಿಗಳು ಮುಂದಾಗುವ ನಿಟ್ಟಿನಲ್ಲಿ ಇಂಟ್ರಾಕ್ಟ್ ಕ್ಲಬ್ ಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದರು.
ಶ್ರೀ ರಾಮ ಪ್ರೌಢಶಾಲೆ ಮುಖ್ಯ ಶಿಕ್ಷಕ ಆರಾಧ್ಯ ಕಿಶೋರ್ ಮಾತನಾಡಿ ಸಮಾಜದ ಅಭಿವೃದ್ಧಿಗೆ ಸರ್ಕಾರದ ಜೊತೆ ಸರ್ಕಾರೇತರ ಸಂಸ್ಥೆಯಾಗಿ ರೋಟರಿ ಪಾತ್ರ ಬಹಳ ಪ್ರಮುಖವಾಗಿದೆ ಇವರ ಕಾರ್ಯ ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಲಿ ಎಂದರು.

ಈ ವೇಳೆ ಇಂಟ್ರಾಕ್ಟ್ ಅಧ್ಯಕ್ಷರಾಗಿ ಪ್ರಶಾಂತ್ ಹಾಗೂ ಕಾರ್ಯದರ್ಶಿಯಾಗಿ ಸಮೀಕ್ಷಾ ಆಯ್ಕೆಯಾಗಿ ವಲಯ 6ರ ಸಹಾಯಕ ಗವರ್ನರ್ ತಿರುಮಲಾಪುರ ರಾಜೇಗೌಡ ಅವರಿಂದ ಅಧಿಕಾರ ಸ್ವೀಕಾರ ಮಾಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಮಂಜುನಾಥ್, ಮುಖಂಡರಾದ ಶಿವರಾಜ್, ರೋಟರಿ ಪಿರಿಯಾಪಟ್ಟಣ ಮಿಡ್ ಟೌನ್ ಕಾರ್ಯದರ್ಶಿ ಚೇತನ್, ಇಂಟ್ರಾಕ್ಟ್ ಕ್ಲಬ್ ಚೇರ್ಮನ್ ಗುರುದತ್, ಸದಸ್ಯರಾದ ಎಂ.ಪಿ ರಾಜು, ಸುನಿಲ್ ಗೌಡ, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.