Saturday, September 13, 2025
Google search engine

Homeರಾಜ್ಯರಾಜ್ಯದಲ್ಲಿ 882 ಕೋಟಿ ವೆಚ್ಚದ ಸೌರ ಕೋಶ ಘಟಕ ಸ್ಥಾಪನೆ: ಎಂ. ಬಿ. ಪಾಟೀಲ

ರಾಜ್ಯದಲ್ಲಿ 882 ಕೋಟಿ ವೆಚ್ಚದ ಸೌರ ಕೋಶ ಘಟಕ ಸ್ಥಾಪನೆ: ಎಂ. ಬಿ. ಪಾಟೀಲ

ಬೆಂಗಳೂರು: ʼರಾಜ್ಯದಲ್ಲಿ ಅಂದಾಜು ₹ 882 ಕೋಟಿ ವೆಚ್ಚದಲ್ಲಿ ಸೌರ ಕೋಶ ತಯಾರಿಸುವ ಘಟಕ ಸಾಪಿಸುವುದನ್ನು ಜಪಾನಿನ ಹೊಸೊಡಾ ಹೋಲ್ಡಿಂಗ್ಸ್‌ ಖಚಿತಪಡಿಸಿದೆʼ ಎಂದು ಬೃಹತ್ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಅವರು ತಿಳಿಸಿದ್ದಾರೆ.

ʼತೋಂಗ್‌ ತರ್‌ ಎನರ್ಜಿ ಸೊಲುಷನ್ಸ್‌ (ಟಿಟಿಇಎಸ್‌) ಸಹಯೋಗದಲ್ಲಿ ಈ ಯೋಜನೆ ಕಾರ್ಯಗತಗೊಳ್ಳಲಿದೆ. ಆರಂಭದಲ್ಲಿ ಟಿಟಿಇಎಸ್‌ ಈ ಯೋಜನೆಗೆ ₹490 ಕೋಟಿ ವೆಚ್ಚ ಮಾಡಲು ನಿರ್ಧರಿಸಿತ್ತು. ಫೆಬ್ರುವರಿಯಲ್ಲಿ ನಡೆದಿದ್ದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಈ ಯೋಜನೆಯ ಒಪ್ಪಂದಕ್ಕೆ ಅಂಕಿತ ಹಾಕಲಾಗಿತ್ತು. ಟಿಟಿಇಎಸ್‌ ಜೊತೆಗಿನ ಪಾಲುದಾರಿಕೆ ಫಲವಾಗಿ ಈ ಯೋಜನೆಯ ಹೂಡಿಕೆ ಮೊತ್ತವನ್ನು ಹೊಸೊಡಾ ಹೋಲ್ಡಿಂಗ್ಸ್‌ ಹೆಚ್ಚಿಸಿದೆ. ಇದರಿಂದ ರಾಜ್ಯದಲ್ಲಿ 500 ಜನರಿಗೆ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆʼ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಜಪಾನ್‌ಗೆ ಭೇಟಿ ನೀಡಿರುವ ರಾಜ್ಯದ ಉನ್ನತ ಮಟ್ಟದ ನಿಯೋಗದ ನೇತೃತ್ವವಹಿಸಿರುವ ಸಚಿವರು, ಶುಕ್ರವಾರ ಹೊಸೊಡಾ ಹೋಲ್ಡಿಂಗ್ಸ್‌ನ ಅಧ್ಯಕ್ಷ ನಕಾಮುರಾ ಸ್ಯಾನ್‌ ಅವರ ಜೊತೆಗೆ ನಡೆಸಿದ ಸಮಾಲೋಚನೆಯಲ್ಲಿ ಕಂಪನಿಯು ಈ ಹೂಡಿಕೆ ಹೆಚ್ಚಳವನ್ನು ಖಚಿತಪಡಿಸಿದೆ.

ʼಬಂಡವಾಳ ಹೂಡಿಕೆ ಹೆಚ್ಚಿಸುವ ಕಂಪನಿಯ ನಿರ್ಧಾರವು ಸ್ವಾಗತಾರ್ಹವಾಗಿದ್ದು, ಸೌರಶಕ್ತಿ ಉತ್ಪಾದನೆಗೆ ರಾಜ್ಯ ಸರ್ಕಾರ ನೀಡುತ್ತಿರುವ ಆದ್ಯತೆಯನ್ನು ಈ ನಿರ್ಧಾರವು ಸಮರ್ಥಿಸುತ್ತದೆʼ ಎಂದು ಸಚಿವರು ಸಂತಸ ವ್ಯಕ್ತಪಡಿಸಿದ್ದಾರೆ.
ಕ್ರೀಡಾ ಪರಿಕರಗಳನ್ನು ತಯಾರಿಸುವ ಕರ್ನಾಟಕದಲ್ಲಿನ ತನ್ನ ಘಟಕವು 2027ರ ವೇಳೆಗೆ ಕಾರ್ಯಾರಂಭ ಮಾಡಲಿದೆ ಎಂದು ಜಪಾನಿನ ಇನಾಬತಾ ಕಂಪನಿಯು ಕರ್ನಾಟಕದ ನಿಯೋಗಕ್ಕೆ ಭರವಸೆ ನೀಡಿದೆ.

ತಯಾರಿಕಾ ಘಟಕ ಸ್ಥಾಪನೆಗೆ ಅಗತ್ಯವಾದ ಭೂಮಿ ಸ್ವಾಧೀನ ಹಾಗೂ ಸಂಬಂಧಿತ ಅನುಮೋದನೆಗಳನ್ನು ತ್ವರಿತವಾಗಿ ಒದಗಿಸಲಾಗುವುದು ಎಂದು ನಿಯೋಗವು ಭರವಸೆ ನೀಡಿದೆ.

ಲೋಹದ ಉಪಕರಣ ಬಳಸಿ ನಿರ್ದಿಷ್ಟ ಆಕಾರದಲ್ಲಿ ನಿಖರವಾಗಿ ಕತ್ತರಿಸುವ ತಂತ್ರಜ್ಞಾನದಲ್ಲಿ ಪರಿಣತಿ ಹೊಂದಿರುವ (ಎನ್‌ಗ್ರೇವಿಂಗ್‌ ಮತ್ತು ಡೈಕಟಿಂಗ್‌ ಟೆಕ್ನಾಲಜಿ) ಟೆತ್ಸುಜಿಕವಾ ಕಂಪನಿಯು ರಾಜ್ಯದಲ್ಲಿ ತನ್ನ ತಯಾರಿಕಾ ಚಟುವಟಿಕೆ ವಿಸ್ತರಿಸುವ ಮಾಹಿತಿಯನ್ನು ರಾಜ್ಯದ ನಿಯೋಗದ ಜೊತೆ ಹಂಚಿಕೊಂಡಿದೆ.

ಉನ್ನತ ಮಟ್ಟದ ನಿಯೋಗದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್ ಸೆಲ್ವಕುಮಾರ್‌, ಕೈಗಾರಿಕಾ ಇಲಾಖೆ ಆಯುಕ್ತರಾದ ಗುಂಜನ್ ಕೃಷ್ಣ, ಮತ್ತಿತರರು ಇದ್ದಾರೆ.

RELATED ARTICLES
- Advertisment -
Google search engine

Most Popular