ಬೆಂಗಳೂರು:”ಬಿಜೆಪಿಯಲ್ಲಿ ಕೆಲವರು ಖಾಲಿ ಟ್ರಂಕುಗಳಂತಿದ್ದಾರೆ. ಅವರು ಶಬ್ದ ಮಾತ್ರ ಮಾಡುತ್ತಾರೆ. ಬರೀ ಬಾಯಿ ಮಾತು ಬಿಟ್ಟರೆ, ಪ್ರಧಾನಿಯನ್ನು ಭೇಟಿಯಾಗಿ ರಾಜ್ಯಕ್ಕೆ ಹತ್ತು ರೂಪಾಯಿಯಾದರೂ ಅನುದಾನ ತರಲಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಟೀಕೆ ಮಾಡಿದ್ದಾರೆ.
ನಗರದ ಖಾಸಗಿ ಹೋಟೆಲ್ ಬಳಿ ಸೋಮವಾರ ಮಾಧ್ಯಮಗಳ ಪ್ರಶ್ನೆಗೆ ಉತ್ತರ ನೀಡಿದ ಅವರು, “ಬರೀ ಶಬ್ದ ಮಾಡುವವರಿಗೂ ಅನುದಾನ ಕುರಿತ ಮಾಹಿತಿಗಳನ್ನು ಕಳುಹಿಸಿದ್ದೇನೆ. ಈವರೆಗೆ ಯಾರೂ ಅನುದಾನ ತರಲು ಪ್ರಯತ್ನಿಸಿಲ್ಲ. ಪ್ರಧಾನಿಯನ್ನು ಭೇಟಿಯಾದವರಿಲ್ಲ. ಬೆಂಗಳೂರಿಗೆ ಏನೂ ತರಲಾಗಿಲ್ಲ” ಎಂದರು.
ಪ್ರಧಾನಿಯ ಮಾತಿಗೆ ಭರವಸೆ
“ಬೆಂಗಳೂರು ಅಭಿವೃದ್ಧಿಗೆ ಅನುದಾನ ಕುರಿತು ಪ್ರಧಾನಿ ಮೋದಿಯವರೊಂದಿಗೆ ಮಾತುಕತೆ ನಡೆದಿದೆ. ಅವರು ಮನವಿ ಪರಿಗಣಿಸುವ ಭರವಸೆ ನೀಡಿದ್ದಾರೆ. ಬೆಂಗಳೂರನ್ನು ಜಾಗತಿಕ ನಗರ ಎಂದು ಅವರು ಒಪ್ಪಿಕೊಂಡಿದ್ದಾರೆ. ಈ ನಗರ ಭಾರತದ ಪ್ರತಿನಿಧಿ ಆಗಿದೆ” ಎಂದು ಹೇಳಿದ್ದಾರೆ.
ರಾಜಕೀಯಕ್ಕಿಂತ ರಾಜ್ಯದ ಹಿತ ಮುಖ್ಯ
“ಬೆಂಗಳೂರು ಅಭಿವೃದ್ಧಿಗೆ ಎಲ್ಲಾ ಪಕ್ಷಗಳ ಸಹಕಾರವಿದೆ. ಯಾರೊಬ್ಬರೂ ಈ ಕ್ರೆಡಿಟ್‌ನ್ನು ಸ್ವತಃ ತೆಗೆದುಕೊಳ್ಳಬಾರದು. ಎಲ್ಲರ ಜವಾಬ್ದಾರಿ ಇದು,” ಎಂದು ತಿಳಿಸಿದರು.
ರಾಹುಲ್ ಗಾಂಧಿಗೆ ನೋಟಿಸ್?
ಚುನಾವಣೆ ಆಯೋಗ ನೀಡಿದ ನೋಟಿಸ್ ಕುರಿತು, “ನೋಟಿಸ್ ನೀಡಲಿ ಬಿಡಿ. ಅವರು ಯಾರೋ? ನಾವು ಪ್ರಜಾಪ್ರಭುತ್ವದಲ್ಲಿ ನ್ಯಾಯಯುತವಾಗಿ ಗೆದ್ದಿದ್ದೇವೆ. ನಾವು ಕಾನೂನಾತ್ಮಕವಾಗಿ ಉತ್ತರ ನೀಡುತ್ತೇವೆ” ಎಂದು ಸ್ಪಷ್ಟಪಡಿಸಿದರು.