ಬೆಂಗಳೂರು: ಕರ್ನಾಟಕದಲ್ಲಿ ಭಾಷಾ ವಿವಾದ ಮತ್ತು ಹಿಂದಿ ಹೇರಿಕೆ ಕುರಿತ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರವು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು ಇನ್ನು ಮುಂದೆ ಎಸ್ಎಸ್ಎಲ್ಸಿ ಹಿಂದಿಯನ್ನು ಹೊರಗಿಟ್ಟು, 525 ಅಂಕಗಳಿಗೆ ಮಾತ್ರ ಪರೀಕ್ಷೆಯನ್ನು ನಡೆಸಲಾಗುವುದು ಎಂದು ತಿಳಿಸಿದೆ.
ಕಳೆದ ಹಲವು ದಿನಗಳಿಂದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸಬಾರದು ಮತ್ತು ಅದನ್ನು ಅಂಕಗಳ ಪಟ್ಟಿಯಿಂದ ಹೊರಗಿಡಬೇಕು ಎಂದು ವಿವಿಧ ಕನ್ನಡ ಪರ ಸಂಘಟನೆಗಳು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದವು. ಸಂಘಟನೆಗಳ ಈ ನ್ಯಾಯಸಮ್ಮತ ಬೇಡಿಕೆಗೆ ಸ್ಪಂದಿಸಿದ ಸಚಿವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಈ ಐತಿಹಾಸಿಕ ತೀರ್ಮಾನವನ್ನು ಕೈಗೊಂಡಿದ್ದಾರೆ.
ಈ ಹಿನ್ನಲೆಯಲ್ಲಿ ಇನ್ನು ಮುಂದೆ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಹಿಂದಿ ವಿಷಯದ ಅಂಕಗಳನ್ನು ಒಟ್ಟು ಅಂಕಗಳ ಪಟ್ಟಿಗೆ ಪರಿಗಣಿಸಲಾಗುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಇಲ್ಲಿಯವರೆಗೆ ಎಸ್ಎಸ್ಎಲ್ಸಿ ಪರೀಕ್ಷೆಯು ಒಟ್ಟು 625 ಅಂಕಗಳಿಗೆ ನಡೆಯುತ್ತಿತ್ತು. ಆದರೆ ಈಗ ಹಿಂದಿ ವಿಷಯದ 100 ಅಂಕಗಳನ್ನು ಹೊರಗಿಟ್ಟಿರುವುದರಿಂದ, ಇನ್ನು ಮುಂದೆ ವಿದ್ಯಾರ್ಥಿಗಳ ಫಲಿತಾಂಶವನ್ನು ಕೇವಲ 525 ಅಂಕಗಳಿಗೆ ಮಾತ್ರ ಪರಿಗಣಿಸಲಾಗುತ್ತದೆ.
ಹೊಸ ನಿಯಮದ ಪ್ರಕಾರ, ತೃತೀಯ ಭಾಷೆಯಾದ ಹಿಂದಿ (ಅಥವಾ ಯಾವುದೇ ತೃತೀಯ ಭಾಷೆ) ವಿಷಯದಲ್ಲಿ ವಿದ್ಯಾರ್ಥಿಗಳು ಗಳಿಸುವ ಅಂಕಗಳನ್ನು ಒಟ್ಟು ಮೊತ್ತಕ್ಕೆ ಸೇರಿಸಲಾಗುವುದಿಲ್ಲ. ಬದಲಾಗಿ, ಈ ವಿಷಯದಲ್ಲಿ ವಿದ್ಯಾರ್ಥಿಯ ಸಾಧನೆಯನ್ನು ಕೇವಲ ‘ಗ್ರೇಡ್’ ಮೂಲಕ ಅಳೆಯಲಾಗುತ್ತದೆ. ಆದರೆ, ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವುದು ಕಡ್ಡಾಯವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.



