ಬೆಂಗಳೂರು: ಬೆಂಗಳೂರು ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಹನ್ನೊಂದು ಮಂದಿಯ ಜೀವ ಹಾರಿದ ಕಾಲ್ತುಳಿತ ಘಟನೆಯ ಬಗ್ಗೆ ಕೇಂದ್ರ ಆಡಳಿತ ನ್ಯಾಯಮಂಡಳಿ (CAT) ನೀಡಿದ ಆದೇಶದ ವಿರುದ್ಧ ಐಪಿಎಲ್ ಚಾಂಪಿಯನ್ ಆರ್‌ಸಿಬಿ (RCB) ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
CAT ನೀಡಿದ ಆದೇಶದಲ್ಲಿ, ಐಪಿಎಲ್ ಗೆಲುವಿನ ಬಳಿಕ ಆರ್‌ಸಿಬಿ ಘೋಷಣೆ ಹಠಾತ್ತನೆ ಆಗಿದ್ದರಿಂದ 3ರಿಂದ 5 ಲಕ್ಷ ಜನರು ಕ್ರೀಡಾಂಗಣದ ಹೊರಗೆ ಗುಂಪುಗಟ್ಟಿದ್ದು, ಇದರಿಂದ ಕಾಲ್ತುಳಿತ ಉಂಟಾಗಿ ಮೃತ್ಯು ಸಂಭವಿಸಿದೆ ಎಂದು ಹೇಳಿತ್ತು. ಆದರೆ, ಆರ್‌ಸಿಬಿ ತನ್ನ ಅಭಿಪ್ರಾಯ ಕೇಳದೆ ಆದೇಶ ನೀಡಿರುವುದು ಸಹಜ ನ್ಯಾಯ ತತ್ವಗಳಿಗೆ ವಿರುದ್ಧವಾಗಿದೆ ಎಂದು ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಆಕ್ಷೇಪಿಸಿದೆ.
ಘಟನೆ ಸಂಬಂಧ ಯಾವುದೇ ನಿರ್ಣಾಯಕ ತನಿಖಾ ವರದಿ ಹೊರಬರದಿರುವಾಗ CAT ಆದೇಶ ನೀಡಿರುವುದು ಅಸಮಂಜಸವಾಗಿದೆ ಎಂದು ಆರ್‌ಸಿಬಿ ವಾದಿಸಿದೆ. ಜೊತೆಗೆ, ವಿಜಯೋತ್ಸವಕ್ಕೆ ಅನುಮತಿ ಪಡೆಯುವ ಹೊಣೆಗಾರಿಕೆ ಮೆಸರ್ಸ್ ಡಿಎನ್‌ಎ ಮತ್ತು ಕೆಎಸ್‌ಸಿಎ ಸಂಸ್ಥೆಗಳ ಮೇಲಿದೆ ಎಂಬುದನ್ನು ಒತ್ತಿಹೇಳಿದೆ.
ಹೀಗಾಗಿ, ಆರ್‌ಸಿಬಿ ವಿರುದ್ಧ ಮಾಡಿದ ಆರೋಪಗಳನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು ಎಂಬುದಾಗಿ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದೆ.