ಬೆಂಗಳೂರು : ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಕುರಿತು ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಡಿ.ಕುನ್ಹಾ ಅವರ ವರದಿಯನ್ನು ಸರ್ಕಾರ ಒಪ್ಪಿಕೊಂಡಿದೆ ಎಂದು ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಹೇಳಿದರು.
ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುನ್ಹಾ ಅವರ ವರದಿಯನ್ನು ಸರ್ಕಾರ ಒಪ್ಪಿಕೊಂಡಿದೆ. ಅದರಲ್ಲಿ ಶಿಫಾರಸ್ಸು ಮಾಡಿರುವ ಅಂಶಗಳನ್ನು ಅನುಷ್ಟಾನ ಮಾಡುತ್ತೇವೆ. ಆರ್ಸಿಬಿ, ಡಿಎನ್ಎ ಅವರ ವಿರುದ್ಧದ ಹೈಕೋರ್ಟ್ನಲ್ಲಿರುವ ಕೇಸ್ಗಳು ಮುಂದುವರೆಯುತ್ತವೆ ಎಂದರು.
ಪೊಲೀಸ್ ಅಧಿಕಾರಿಗಳನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ. ಇಲಾಖಾ ವಿಚಾರಣೆಗೆ ಒಳಪಡಿಸಲು ಸರ್ಕಾರ ತೀರ್ಮಾನಿಸಿದೆ. ಮುಂದೆ ನಡೆಯುವ ಮ್ಯಾಚ್ಗಳಿಗೆ ಅನುಮತಿ ನೀಡುವಾಗ ಯಾವ ರೀತಿಯ ಕಂಡೀಷನ್ಸ್ ಹಾಕಬೇಕು. ಜನಸಮೂಹ ನಿಯಂತ್ರಣಕ್ಕೆ ನಿಯಮ ಮಾಡಬೇಕು ಎಂಬುದು ಸೇರಿದಂತೆ ವರದಿಯಲ್ಲಿನ ಶಿಫಾರಸ್ಸುಗಳನ್ನು ಸರ್ಕಾರ ಪರಿಗಣಿಸುತ್ತದೆ ಎಂದರು.
ಬಿಜೆಪಿಯವರು ವಿರೋಧ ಪಕ್ಷದ ಸ್ಥಾನದಲ್ಲಿದ್ದಾರೆ. ಪಾಸಿಟಿವ್ ಟೀಕೆಗಳನ್ನು ಮಾಡಿ, ಸಲಹೆಗಳನ್ನು ನೀಡಲಿ. ಸಲಹೆಗಳು ಉತ್ತಮವಾಗಿದ್ದರೆ ವಿರೋಧ ಪಕ್ಷ ಅಂದುಕೊಳ್ಳದೆ, ರಾಜ್ಯದ ಮತ್ತು ಜನರ ದೃಷ್ಟಿಯಿಂದ ಪರಿಗಣಿಸುತ್ತೇವೆ ಎಂದು ಹೇಳಿದರು.
ಬಿಜೆಪಿಯವರು ಟೀಕೆಗಳನ್ನು ಮಾಡುತ್ತಿರುತ್ತಾರೆ. ಅದಕ್ಕೆ ಏನು ಮಾಡಲು ಆಗುವುದಿಲ್ಲ. ವಿರೋಧ ಪಕ್ಷದಲ್ಲಿದ್ದಾಗ ಟೀಕೆ ಮಾಡುವುದು ಸಹಜ. ಅದಕ್ಕೆ ಮಾಡಬೇಡಿ ಅಂತ ಹೇಳಲು ಆಗುತ್ತದೆಯೇ? ಎಂದರು.
ವರದಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಗೋವಿಂದರಾಜು ಅವರ ಹೆಸರು ಉಲ್ಲೇಖವಿಲ್ಲ. ಆರ್ಸಿಬಿ, ಡಿಎನ್ಎ, ಕೆಎಸ್ಸಿಎ, ಪೊಲೀಸ್ ಅಧಿಕಾರಿಗಳ ಬಗ್ಗೆ ಉಲ್ಲೇಖವಿದೆ.
ರಾಹುಲ್ ಗಾಂಧಿ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿ, ಈಗಾಗಲೇ ಪಕ್ಷದ ಅಧ್ಯಕ್ಷರು ಪ್ರತಿಕ್ರಿಯಿಸಿದ್ದಾರೆ. ಅಂತದ್ದು ನಡೆದಿದೆ ಎಂದು ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇಡೀ ದೇಶದಲ್ಲಿ ಲೋಕಸಭಾ ಚುನಾವಣೆ ಅಕ್ರಮ ಆಗಿದೆ. ಕರ್ನಾಟಕದಲ್ಲೂ ಆಗಿದೆ ಅಂದಿದ್ದಾರೆ. ಅದನ್ನ ಸಾಬೀತುಪಡಿಸುವುದಾಗಿ ತಿಳಿಸಿದ್ದಾರೆ ಎಂದರು
ಮಹಾದಾಯಿ ವಿಚಾರದ ಕುರಿತು ಪ್ರತಿಕ್ರಿಯಿಸಿ 2022ರಲ್ಲಿ ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಆನಂತರದ ಬೆಳವಣಿಗೆಯಲ್ಲಿ ನಿಲ್ಲಿಸಿದರು. ಗೋವಾ ಮತ್ತು ರಾಜ್ಯಕ್ಕು ಒಂದು ರೀತಿಯ ಸಂಘರ್ಷ ಪ್ರಾರಂಭವಾಗಿದೆ. ಕುಡಿಯುವ ನೀರಿನ ಯೋಜನೆಗೆ ಯಾವುದೇ ರೀತಿಯ ನಿರ್ಬಂಧ ಇರಬಾರದು ಎಂದು ಕೇಂದ್ರ ಸರ್ಕಾರ ಅನೇಕ ಸಂದರ್ಭಗಳಲ್ಲಿ ಹೇಳಿದೆ.
ಮಹಾದಾಯಿ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿ ಬೇಗ ಬಗೆಹರಿಸಿಕೊಟ್ಟರೆ ಸಂತೋಷ. ಇದನ್ನೇ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದೇವೆ ಎಂದು ತಿಳಿಸಿದರು
ಮೇಕೆದಾಟು ಯೋಜನೆ ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಯೋಜನೆ. ನೀರಾವರಿ ಯೋಜನೆ ಎಂದುಕೊಂಡಿಲ್ಲ. ಮೇಕೆದಾಟು ಯೋಜನೆಯಿಂದ ಬೆಂಗಳೂರಿಗೆ 47 ಟಿಎಂಸಿ ನೀರು ಸಿಗುತ್ತದೆ. ಇದಕ್ಕೆ ಕೇಂದ್ರ ಸರ್ಕಾರ ಅನುಮತಿ ಕೊಡಬೇಕು. ಸರ್ವಪಕ್ಷಗಳ ಸಭೆ ಕರೆಯುವ ಬಗ್ಗೆ ಮುಖ್ಯಮಂತ್ರಿಗಳು, ನೀರಾವರಿ ಸಚಿವರು ತೀರ್ಮಾನ ಮಾಡುತ್ತಾರೆ ಎಂದರು.