ಬೆಂಗಳೂರು: ಜೂನ್ 4 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಐಪಿಎಲ್ ಗೆಲುವು ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ದುರಂತ ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಡಿ ಕುನ್ಹಾ ನೇತೃತ್ವದ ಏಕಸದಸ್ಯ ಆಯೋಗ ತನ್ನ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದೆ.
ಘಟನೆಯಲ್ಲಿ 11 ಜನ ಆರ್ಸಿಬಿ ಅಭಿಮಾನಿಗಳು ದುರಂತವಾಗಿ ಮೃತಪಟ್ಟಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿತ್ತು. ಸರ್ಕಾರದ ನಿರ್ದೇಶನದಂತೆ, ಒಂದು ತಿಂಗಳೊಳಗೆ ತನಿಖೆ ನಡೆಸಿ ವರದಿ ನೀಡುವ ಕಾರ್ಯದಲ್ಲಿ ನ್ಯಾಯಾಧೀಶ ಕುನ್ಹಾ ಅವರು ನಿಷ್ಠೆಯಿಂದ ತೊಡಗಿದ್ದರು.
ಈ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ, “ಎರಡು ಸಂಪುಟಗಳ ತನಿಖಾ ವರದಿ ನಮಗೆ ಲಭ್ಯವಾಗಿದೆ. ಜುಲೈ 17ರಂದು ನಡೆಯುವ ಸಚಿವ ಸಂಪುಟದಲ್ಲಿ ಈ ವರದಿ ಮಂಡಿಸಲಾಗುವುದು” ಎಂದು ತಿಳಿಸಿದರು.
ಇದೇ ಪ್ರಕರಣದ ತನಿಖೆಯನ್ನು ಸಿಐಡಿ ಪ್ರತ್ಯೇಕವಾಗಿ ನಡೆಯುತ್ತಿದ್ದು, “ವಿರಾಟ್ ಕೊಹ್ಲಿ” ಕಾರಣದಿಂದಾಗಿ ಕಾರ್ಯಕ್ರಮವನ್ನು ತರಾತುರಿಯಲ್ಲಿ ಆಯೋಜಿಸಿದ್ದೇ ದುರಂತಕ್ಕೆ ಕಾರಣವಾಯಿತೆಂದು ಅಂಶಗಳು ಬೆಳಕಿಗೆ ಬಂದಿವೆ. ಸಿಐಡಿ ತನಿಖೆಯಲ್ಲಿ ಇನ್ನೂ ಹಲವಾರು ಅಂಶಗಳನ್ನು ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇನ್ನು ಹೈಕೋರ್ಟು ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ದಾಖಲಿಸಿಕೊಂಡಿದ್ದು, ಹಿರಿಯ ವಕೀಲ ಎಸ್.ಸುಶೀಲಾ ಅವರನ್ನು ಅಮೈಕಸ್ ಕ್ಯೂರಿಯಾಗಿ ನೇಮಿಸಿದೆ. ಈ ಪ್ರಕರಣದ ಸಂಬಂಧ ನ್ಯಾಯಾಲಯದ ಮುಂದಿನ ವಿಚಾರಣೆಗಳತ್ತ ರಾಜ್ಯದ ಗಮನ ಸೆಳೆಯುತ್ತಿದೆ.