ಕೊಪ್ಪಳ : ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಹತ್ತು ದಿನಗಳ ಕಾಲ ನಡೆದ ರಾಜ್ಯ ಮಟ್ಟದ ಖಾದಿ ಗ್ರಾಮೋದ್ಯೋಗ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ತೆರೆ ದೊರೆತಿದ್ದು, ರೂ. 1.50 ಕೋಟಿ ವಹಿವಾಟು ಮೂಲಕ ಖಾದಿ ಉತ್ಸವವು ಯಶಸ್ವಿಯಾಗಿ ಮುಕ್ತಾಯಗೊಂಡಿರುತ್ತದೆ.
ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೊದ್ಯೋಗ ಮಂಡಳಿ, ಬೆಂಗಳೂರು ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಕೊಪ್ಪಳ ಇವರ ಸಹಯೋಗದೊಂದಿಗೆ ಸರ್ಕಾರದ ವತಿಯಿಂದ “ರಾಜ್ಯ ಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಮಾರಾಟ “ಖಾದಿ ಉತ್ಸವ-2025” ಮೇಳವನ್ನು ಕೊಪ್ಪಳ ನಗರದ ಹೊಸಪೇಟೆ ರಸ್ತೆಯ ನಗರಸಭೆ ಎದುರುಗಡೆಯಲ್ಲಿರುವ ಶಾದಿ ಮಹಲ್‌ನಲ್ಲಿ ಏರ್ಪಡಿಸಲಾಗಿತ್ತು.
ಈ ವಸ್ತು ಪ್ರದರ್ಶನದಲ್ಲಿ ಒಟ್ಟು 52 ಮಳಿಗೆಗಳನ್ನು ನಿರ್ಮಾಣ ಮಾಡಲಾಗಿತ್ತು. ಅದರಲ್ಲಿ 11 ಖಾದಿ ಸಂಘ-ಸಂಸ್ಥೆಗಳು ಮತ್ತು 6 ಸಿಲ್ಕ್ ಸಂಘ-ಸಂಸ್ಥೆಗಳು ಹಾಗೂ 35 ಗ್ರಾಮೋದ್ಯೋಗ ಉತ್ಪನ್ನಗಳ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿತ್ತು. ದೇಶದ ವಿವಿಧ ರಾಜ್ಯಗಳಿಂದ ಮತ್ತು ಕರ್ನಾಟಕದಿಂದ ಪಿಎಂಇಜಿಪಿ, ಸಿಎಂಇಜಿಪಿ ಯೋಜನೆಯಡಿ ಸಾಲ ಪಡೆದ ಫಲಾನುಭವಿಗಳು ಖಾದಿ ಆಯೋಗದಿಂದ ಮನ್ನಣೆ ಪಡೆದ, ಸಹಾಯಧನ ಪಡೆದ ಖಾದಿ ಸಂಘ-ಸಂಸ್ಥೆಯವರು ಭಾಗವಹಿಸಿದ್ದರು.
ಈ ಖಾದಿ ಮಾರಾಟ ಮೇಳದಲ್ಲಿ 10 ದಿನಗಳಿಗೆ ರೂ. 66.88 ಲಕ್ಷಗಳ ಖಾದಿ ಮತ್ತು ಸಿಲ್ಕ್ ಮಾರಾಟವಾಗಿದೆ. ಗ್ರಾಮೋದ್ಯೋಗದ ಉತ್ಪನ್ನಗಳಾದ ರೆಡಿಮೆಡ ಗಾರ್ಮೆಂಟ್ಸ್, ಆಯುವೇರ್ದಿಕ ವಸ್ತುಗಳು, ಚನ್ನಪಟ್ಟಣದ ಗೊಂಬೆ, ನೈಸರ್ಗಿಕವಾದ ಚಾಪೆಗಳು ಮತ್ತು ಚಪ್ಪಲಿಗಳು ಸೇರಿದಂತೆ ರೂ. 83.74 ಲಕ್ಷಗಳ ಗ್ರಾಮೋದ್ಯೋಗ ವಸ್ತುಗಳ ಮಾರಾಟ ಒಳಗೊಂಡಂತೆ ಒಟ್ಟಾರೆ ರೂ. 1.50 ಕೋಟಿ ಮೌಲ್ಯದ ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳು ಮಾರಾಟವಾಗಿರುತ್ತದೆ.
ಖಾದಿ ಉತ್ಸವ-2025ರ ರಾಜ್ಯ ಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಮಾರಾಟ ಮೇಳದಲ್ಲಿ 30,000 ಜನರು ಭೇಟಿ ನೀಡಿದ್ದು, ಕೊಪ್ಪಳ ಜಿಲ್ಲೆ ಹಾಗೂ ಸುತ್ತಾಲಿನ ಜಿಲ್ಲೆಗಳಿಂದ ಸಾರ್ವಜನಿಕರು ಭೇಟಿ ನೀಡಿ ಖಾದಿ ಉತ್ಪನ್ನಗಳನ್ನು ಖರೀದಿಸಿ ಪ್ರೋತ್ಸಾಹಿಸಿದ್ದಾರೆ. 13 ವರ್ಷಗಳ ನಂತರ ಆಯೋಜಿಸಿದ ಈ ವಸ್ತು ಪ್ರದರ್ಶನವು ಯಶಸ್ವಿಯಾಗಿ ಮುಕ್ತಾಯಗೊಂಡಿರುತ್ತದೆ.
ಪ್ರಮಾಣ ಪತ್ರಗಳ ವಿತರಣೆ: ರಾಜ್ಯ ಮಟ್ಟದ ಖಾದಿ ಗ್ರಾಮೋದ್ಯೋಗ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಭಾಗವಹಿಸಿದ ಪ್ರದರ್ಶಕರಿಗೆ ಕೊಪ್ಪಳ ನಗರಸಭೆ ಪೌರಾಯುಕ್ತರಾದ ವೆಂಕಟೇಶ ನಾಗನೂರು, ಕೊಪ್ಪಳ ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಕಾರ್ಪಣಿ ಮಾರುತಿ ಹಾಗೂ ಕೊಪ್ಪಳ ಎಸ್.ಬಿ.ಐ. ಆರ್ಸೆಟಿ ನಿರ್ದೇಶಕ ರಾಯೇಶ್ವರ ಪೈ ಅವರು ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೊದ್ಯೋಗ ಮಂಡಳಿ ಕೊಪ್ಪಳ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಕೆ.ವಿರೇಶ್, ನಿವೃತ್ತ ಜಿಲ್ಲಾ ಖಾದಿ ಗ್ರಾಮೊದ್ಯೋಗ ಅಧಿಕಾರಿ ಎನ್.ಜಿ ಹುನಗುಂದ ಸೇರಿದಂತೆ ಖಾದಿ ಮತ್ತು ಗ್ರಾಮೊದ್ಯೋಗ ಮಂಡಳಿ ಕೊಪ್ಪಳ ಕಛೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.