ಬೆಂಗಳೂರು: ರಾಜ್ಯಾದ್ಯಂತ ಮುಂದಿನ ಮೂರು ದಿನಗಳು ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಶುಕ್ರವಾರ ಮುನ್ಸೂಚನೆ ನೀಡಿದೆ.
ರಾಜ್ಯದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ, ತುಮಕೂರು, ವಿಜಯನಗರ, ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಧಾರವಾಡ, ಬೀದರ್, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಏ.22 ರವರೆಗೆ ಗುಡುಗು ಮಿಂಚು ಸಹಿತ ಮಳೆಯಾಗಲಿದೆ ಎಂದು ಮಾಹಿತಿ ನೀಡಿದೆ.
ಸುಡು ಬಿಸಿಲಿನಿಂದ ಕಂಗೆಟ್ಟಿದ್ದ ಸಿಲಿಕಾನ್ ಸಿಟಿಯಲ್ಲಿ ಶುಕ್ರವಾರ ವರ್ಷದ ಮೊದಲ ಮಳೆಯಾಗಿದೆ. ಅಲ್ಲದೇ ಮಾಗಡಿ ರಸ್ತೆ, ಯಲಹಂಕ, ಕೆಂಗೇರಿ ಸೇರಿದಂತೆ ಕೆಲವು ಭಾಗಗಳಲ್ಲಿ ತುಂತುರು ಮಳೆಯ ಸಿಂಚನವಾಗಿದೆ. ಬಿಸಿಲ ಬೇಗೆಯಿಂದ ತಲ್ಲಣಗೊಂಡಿದ್ದ ಜನ ತುಸು ಈ ಮಳೆಯಿಂದ ನಿರಾಳರಾಗಿದ್ದಾರೆ. ಕೆಂಗೇರಿ, ನಾಗದೇವನಹಳ್ಳಿ, ಹುಣಸಮಾರನಹಳ್ಳಿ, ಅರಕೆರೆ, ರಾಜಾಧಿನುಕುಂಟೆ, ಬೆಟ್ಟ ಹಲಸೂರು, ಸೊನ್ನಪ್ಪನಹಳ್ಳಿ, ಯಲಹಂಕ ವ್ಯಾಪ್ತಿಯ ಕೆಲವು ಕಡೆ ಸಂಜೆ 5 ಗಂಟೆ ಸುಮಾರಿಗೆ ತುಂತುರು ಮಳೆಯಾಗಿದೆ. ಹಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಏಪ್ರಿಲ್ 22 ರವರೆಗೆ ಬೆಂಗಳೂರು ನಗರದ ಹಲವೆಡೆ ಹಗುರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಳೆಯ ಮುನ್ಸೂಚನೆಯ ಬೆನ್ನಲ್ಲೇ ಕೆಲ ಜಿಲ್ಲೆಗಳಲ್ಲಿ ಉಷ್ಣಾಂಶ ಕೂಡ ಮತ್ತೆ ಹೆಚ್ಚಳವಾಗಿದೆ. ಶುಕ್ರವಾರ 7 ಜಿಲ್ಲೆಗಳಲ್ಲಿ ತಾಪಮಾನ 40ರ ಗಡಿ ದಾಟಿದೆ. ಯಾದಗಿರಿಯಲ್ಲಿ ಅತಿ ಹೆಚ್ಚು 43.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.