ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಏ.೨೬ರಂದು ನಡೆಯಲಿರುವ ಲೋಕಸಭಾ ಚುನಾವಣೆಯ ಮತದಾನವನ್ನು ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ನಡೆಸಲು ಆಯೋಗ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಕೆ.ಆರ್.ನಗರ ವ್ಯಾಪ್ತಿಯ ಸಹಾಯಕ ಚುನಾವಣಾಧಿಕಾರಿ ಬಿ.ಸುಪ್ರಿಯಬಣಗಾರ್ ಹೇಳಿದರು.
ತಾಲೂಕು ಕಛೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಕ್ಷೇತ್ರದ ವ್ಯಾಪ್ತಿಯಲ್ಲಿ ೨೫೨ ಮತಗಟ್ಟೆಗಳನ್ನು ತೆರೆಯಲಿದ್ದು ಅಲ್ಲಿ ಚುನಾವಣಾ ಸಿಬ್ಬಂದಿ ಮತ್ತು ಮತದಾನ ಮಾಡಲು ಬರುವವರಿಗೆ ಅನುಕೂಲವಾಗುವಂತೆ ಈಗಾಗಲೇ ಎಲ್ಲಾ ಮೂಲಭೂತ ಸವಲತ್ತು ಒದಗಿಸಲು ಗಮನಹರಿಸಲಾಗಿದೆ ಎಂದರು. ಕ್ಷೇತ್ರದಲ್ಲಿ ಒಟ್ಟು ೨,೧೮,೭೮೬ ಮತದಾರರಿದ್ದು ಈ ಪೈಕಿ ಪುರುಷರು೧,೦೮,೦೦೮ ಮತ್ತು ಮಹಿಳಾ ಮತದಾರರು ೧,೧೦,೭೬೬ರಿದ್ದು ೧೨ ಮಂದಿ ಇತರೆ ಮತದಾರರು ಇದ್ದಾರೆ ಎಂದು ಮಾಹಿತಿ ನೀಡಿದ ಅವರು ಪುರುಷರಿಗಿಂತ ೨,೭೫೮ ಮಂದಿ ಮಹಿಳಾ ಮತದಾರರು ಹೆಚ್ಚಾಗಿ ಇರುವರೆಂದು ತಿಳಿಸಿದರು.
೩,೨೭೦ ಮಂದಿ ವಿಶೇಷ ಚೇತನ ಮತದಾರರ ಪೈಕಿ ೨,೦೩೫ ಪುರುಷರು ಮತ್ತು ೧,೨೩೫ ಮಂದಿ ಮಹಿಳೆಯರಿದ್ದು ಅವರುಗಳು ಮತಗಟ್ಟೆಗೆ ಬಂದಾಗ ಸುಲಲಿತವಾಗಿ ಮತ ಚಲಾಯಿಸಲು ಅಗತ್ಯವಿರುವ ಅನುಕೂಲ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ನುಡಿದರು. ೮೫ ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಮನೆಯಿಂದಲೇ ಮತದಾನ ಮಾಡಲು ಅವಕಾಶ ಮಾಡಿಕೊಡಬೇಕೆಂದು ಅರ್ಜಿ ಸಲ್ಲಿಸಿದ್ದು ೩೫೮ ಮಂದಿಗೆ ೧೨(ಡಿ) ನಮೂನೆ ವಿತರಣೆ ಮಾಡಲಾಗಿದೆ ಎಂದರಲ್ಲದೆ ಚುನಾವಣಾ ಸಂಬಂಧಿತ ಯಾವುದೇ ದೂರುಗಳಿದ್ದರೂ ತಮಗೆ ನೇರವಾಗಿ (೭೩೫೦೧೭೬೯೯೯) ನಿರ್ಭೀತಿಯಿಂದ ಮಾಹಿತಿ ನೀಡಬಹುದು ಎಂದು ಪ್ರಕಟಿಸಿದರು.
ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಮತದಾನ ಮಾಡಲು ೫,೫೩೯ ಮಂದಿ ಯುವ ಮತದಾರರು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದು ಆ ಪೈಕಿ ೩,೦೯೨ ಯುವಕರು ಮತ್ತು ೨,೪೪೭ ಯುವತಿಯರು ಇದ್ದಾರೆ ಎಂದು ತಿಳಿಸಿದರು. ತಹಶೀಲ್ದಾರ್ ಸಿ.ಎಸ್.ಪೂರ್ಣಿಮ ಮಾತನಾಡಿ ಮತಗಟ್ಟೆಗಳಲ್ಲಿ ಅಗತ್ಯ ಮೂಲಭೂತ ಸವಲತ್ತು ಕಲ್ಪಿಸುವಂತೆ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದ್ದು ಈ ಸಂಬಂಧ ನಾವುಗಳು ಸಹ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಹೇಳಿದರು.
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಹೆಚ್.ಕೆ.ಹರೀಶ್ ಮಾತನಾಡಿ ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ೨೫ ಸಾವಿರ ಮೌಲ್ಯದ ಮದ್ಯ, ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಸೀರೆ ಮತ್ತು ಕುಕ್ಕರ್ ವಶಪಡಿಸಿಕೊಳ್ಳಲಾಗಿದೆ ಎಂದರು. ಸಾಲಿಗ್ರಾಮ ತಹಶೀಲ್ದಾರ್ ಎಸ್.ಎನ್.ನರಗುಂದ್, ಸಾಲಿಗ್ರಾಮ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಶಿವಕುಮಾರಿ, ಅಬಕಾರಿ ಎಸ್‌ಐ ಎನ್.ಶ್ರೀನಿವಾಸಮೂರ್ತಿ, ಶಿರಸ್ತೇದಾರ್ ಅಸ್ಲಾಂಭಾಷ, ತಾಲೂಕು ಕಛೇರಿ ಸಿಬ್ಬಂದಿಗಳಾದ ಎಂ.ಸಿ.ಸಣ್ಣಸ್ವಾಮಿ, ದೀಪಕ್, ಯಶವಂತ್, ಸಿ.ಎನ್.ಧ್ರುವಕುಮಾರ್ ಮತ್ತಿತರರು ಇದ್ದರು