ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಸಂದರ್ಭದಲ್ಲಿ ಅಂಬಾರಿ ತೆರಳುವ ರಾಜಮಾರ್ಗ ಎಂದೇ ಖ್ಯಾತವಾಗಿರುವ ನಗರದ ಸಯ್ಯಾಜಿರಾವ್ ರಸ್ತೆಯಲ್ಲಿನ ಬೀದಿ ಬದಿ ವ್ಯಾಪಾರಿಗಳು ಶುಕ್ರವಾರ ಸಂಭ್ರಮ, ಸಡಗರದಿಂದ ೭೯ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದರು.
ಕರ್ನಾಟಕ ಸಿಲ್ಕ್ ಎಂಪೋರಿಯಂ ಪಕ್ಕದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಮೈಸೂರು ಜಿಲ್ಲಾ ಕಾಂಗ್ರೆಸ್ ಪಕ್ಷದ ಬೀದಿ ಬದಿ ವ್ಯಾಪಾರಿಗಳ ವಿಭಾಗದ ಅಧ್ಯಕ್ಷರಾದ ಎಂ.ರಸೂಲ್ ಅವರು ಧ್ವಜಾರೋಹಣ ನೆರವೇರಿಸಿದರು.
ಬಳಿಕ ಅವರು ಮಾತನಾಡಿ, ಪ್ರತಿ ವರ್ಷವು ನಾವು ಆಗಸ್ಟ್ ೧೫ ರಂದು ಸ್ವಾತಂತ್ರ್ಯ ದಿನ ಆಚರಣೆ ಮಾಡುತ್ತೇವೆ. ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಿಂದ ೧೯೪೭ ರಲ್ಲಿ ದೇಶ ಬಿಡುಗಡೆ ಹೊಂದಿದೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವಲ್ಲಿ ಲಕ್ಷಾಂತರ ಜನರು ಪ್ರಾಣ ಬಿಟ್ಟಿದ್ದು, ಹೋರಾಟಗಾರರ ತ್ಯಾಗವನ್ನು ಸ್ಮರಿಸಬೇಕಾಗಿದೆ. ಸ್ವತಂತ್ರದ ಮಹತ್ವದ ಜತೆಗೆ, ನಮ್ಮ ಹೊಣೆ, ಜವಾಬ್ದಾರಿಗಳೇನು ಎಂಬುದನ್ನು ಅರ್ಥ ಮಾಡಿಕೊಂಡು, ದೇಶಕ್ಕೆ ನಾವು ಸಹ ಏನಾದರೂ ಕೊಡುಗೆ ನೀಡಬೇಕಾಗಿದೆ.
ಸಯ್ಯಾಜಿರಾವ್ ರಸ್ತೆಯಲ್ಲಿ ನೂರಾರು ಜನರು ಹತ್ತಾರು ವರ್ಷಗಳಿಂದ ಬೀದಿ ಬದಿಯಲ್ಲಿ ವ್ಯಾಪಾರ ಮಾಡಿಕೊಂಡು ತಮ್ಮ ಜೀವನ ನಡೆಸುತ್ತಿದ್ದಾರೆ. ಇವರೆಲ್ಲರೂ ಕಾಯಕ ಜೀವಿಗಳು, ಬರುವ ಅಲ್ಪಸ್ವಲ್ಪ ಆದಾಯದಲ್ಲೇ ತಮ್ಮ ಮಕ್ಕಳಿಗೆ ಶಿಕ್ಷಣ, ಕುಟುಂಬ ನಿರ್ವಹಣೆ ಮಾಡುತ್ತಾ ಸ್ವಾಭಿಮಾನದಿಂದ ಜೀವನ ನಡೆಸುತ್ತಿದ್ದಾರೆ. ಇಂತಹ ಶ್ರಮಜೀವಿಗಳಿಗೆ ಪೊಲೀಸರು, ಮಹಾನಗರ ಪಾಲಿಕೆಯವರು ಬೆನ್ನುಲುಬಾಗಿ ನಿಲ್ಲಬೇಕು. ಅವರ ವ್ಯಾಪಾರ ವ್ಯವಹಾರಗಳಿಗೆ ಅಡ್ಡಿ ಮಾಡಬಾರದು. ವ್ಯಾಪಾರಿಗಳೂ ಸಹ ಸಾರ್ವಜನಿಕರೊಂದಿಗೆ ಸಭ್ಯತೆಯಿಂದ ಸ್ಪಂದಿಸಿ, ಯಾವುದೇ ರೀತಿಯಲ್ಲಿ ಅಡಚಣೆ ಬಾರದಂತೆ ತಮ್ಮ ವ್ಯಾಪಾರ ವಹಿವಾಟು ನಡೆಸಬೇಕು ಎಂದು ಸಲಹೆ ನೀಡಿದರು.
ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಕೆ.ಆರ್.ಸರ್ಕಲ್ ವೃತ್ತದಿಂದ ಪ್ರಭಾ ಚಿತ್ರಮಂದಿರಕ್ಕೆ ಹೋಗುವ ತಿರುವಿನ ತನಕವೂ ರಸ್ತೆಯ ಎರಡೂ ಮಗ್ಗಲುಗಳಲ್ಲಿ ತ್ರಿವರ್ಣ ಧ್ವಜ ರಾರಾಜಿಸಿದ್ದವು. ರಸ್ತೆಯಲ್ಲಿ ಸಂಚರಿಸಿದ ಸಾವಿರಾರು ಜನರಿಗೆ ಬೀದಿಬದಿ ವ್ಯಾಪಾರಿಗಳು ಸಿಹಿ ವಿತರಣೆ ಮಾಡಿದರು. ಇದೇ ಸಂದರ್ಭದಲ್ಲಿ ಎಂ.ರಸೂಲ್ ಅವರನ್ನು ಬೀದಿ ಬದಿ ವ್ಯಾಪಾರಿಗಳು ಆತ್ಮೀಯವಾಗಿ ಸನ್ಮಾನಿಸಿದರು. ಕಾರ್ಯಕ್ರಮದ ನಿಮಿತ್ತ ಎಲ್ಲ ವ್ಯಾಪಾರಿಗಳ ಬಿಳಿಯ ಸಮಸ್ತ್ರ ಧರಿಸಿ ಕೆಸರಿ, ಬಿಳಿ, ಹಸಿರು ಬಣ್ಣದ ಟವಲ್ ಹಾಕಿಕೊಂಡು ರಾರಾಜಿಸಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಅಜ್ಮಲ್ ಪಾಷ, ಸೈಯದ್ ಮಾಜು, ಟೀಪೂ, ರಹಮತುಲ್ಲಾ, ಜುನೇದ್, ಏಜಾಸ್, ಅಲೀಂ, ಫಯಾಸ್, ಸಾದೀಖ್ ಮುಂತಾದವರು ಇದ್ದರು.
ಸ್ವಾತಂತ್ರ್ಯ ಎಂದರೆ ಭಯಮುಕ್ತವಾಗಿ, ಹಸಿವು ಮುಕ್ತವಾಗಿ ನಿರ್ಭೀತಿಯಿಂದ ಬದುಕುವುದೇ ಸ್ವಾತಂತ್ರ್ಯ, ಪ್ರತಿಯೊಬ್ಬ ವ್ಯಕ್ತಿಗೆ ಈ ಭಾರತದಲ್ಲಿ ಎಲ್ಲ ರೀತಿಯ ಮೂಲಭೂತ ಹಕ್ಕು ಇದೆ. ಎಲ್ಲ ರೀತಿಯ ಸ್ವಾತಂತ್ರ್ಯ ಇದೆ. ಆದರೆ ಒಬ್ಬ ವ್ಯಕ್ತಿಯು ತನ್ನ ಸ್ವಾತಂತ್ರ್ಯ ಹಕ್ಕಿನಿಂದ ಮತ್ತೊಬ್ಬರ ಸ್ವಾತಂತ್ರ್ಯಕ್ಕೆ ಅಡ್ಡಿ ಆಗುವ ಯಾವುದೇ ಕೆಲಸವನ್ನು ಮಾಡಬಾರದು ಎಂಬುದನ್ನು ಸದಾ ನೆನಪಿನಲ್ಲಿ ಇಟ್ಟುಕೊಂಡಿರಬೇಕು. ಈ ಮಾತನ್ನು ಪೋಷಕರು, ಶಿಕ್ಷಕರು ಎಲ್ಲ ಮಕ್ಕಳಿಗೆ ಹೇಳಿಕೊಟ್ಟು, ಅರ್ಥ ಮಾಡಿಸಬೇಕು. ತಮ್ಮ ಮಕ್ಕಳಿಗೆ ನೈತಿಕ ಶಿಕ್ಷಣವನ್ನು ನೀಡಬೇಕು.
ಎಂ.ರಸೂಲ್,
– ಬೀದಿಬದಿ ವ್ಯಾಪಾರಿಗಳ ವಿಭಾಗದ ಮೈಸೂರು ಜಿಲ್ಲಾ ಅಧ್ಯಕ್ಷರು