Wednesday, July 16, 2025
Google search engine

Homeರಾಜ್ಯಸುದ್ದಿಜಾಲಸಾರ್ವಜನಿಕರ ವಿರುದ್ಧ ಸೌಜನ್ಯತೆಯ ಕೊರತೆ ತೋರಿದ ಅಧಿಕಾರಿಗಳಿಗೆ ಕಠಿಣ ಕ್ರಮ: ಶಾಸಕ ಡಿ.ರವಿಶಂಕರ್ ಎಚ್ಚರಿಕೆ

ಸಾರ್ವಜನಿಕರ ವಿರುದ್ಧ ಸೌಜನ್ಯತೆಯ ಕೊರತೆ ತೋರಿದ ಅಧಿಕಾರಿಗಳಿಗೆ ಕಠಿಣ ಕ್ರಮ: ಶಾಸಕ ಡಿ.ರವಿಶಂಕರ್ ಎಚ್ಚರಿಕೆ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಸರ್ಕಾರಿ ಕಛೇರಿಗಳಿಗೆ ಬಂದ ಸಾರ್ವಜನಿಕರೊಂದಿಗೆ ಕೆಲವು ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೌಜನ್ಯದಿಂದ ವರ್ತಿಸುತ್ತಿಲ್ಲ ಮತ್ತು ಸಮಪರ್ಕವಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬಂದಿದ್ದು ಅಂತಹವರು ತಿದ್ದಿ ನಡೆಯದಿದ್ದರೆ ಮುಲಾಜಿಲ್ಲದೆ ಕಠಿಣ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುತ್ತದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಚುನಾಯಿತ ಸದಸ್ಯರು ಮತ್ತು ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಸರ್ಕಾರದ ಯೋಜನೆಗಳು ಯಶ್ವಸಿಯಾಗಿ ಅನುಷ್ಠಾನಗೊಳ್ಳಲು ಸಾಧ್ಯ ಇದನ್ನು ಎಲ್ಲಾ ಇಲಾಖಾ ಅಧಿಕಾರಿಗಳು ಅರಿತುಕೊಳ್ಳಬೇಕು ಎಂದರು.

ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ದೇವಲೋಕದಿಂದ ಇಳಿದುಬಂದವರಲ್ಲ ಸಾರ್ವಜನಿಕರ ಸೇವಕರಾಗಿದ್ದು ಸರ್ಕಾರದ ಕೆಲಸ ದೇವರ ಕೆಲಸ ಎಂದು ತಿಳಿದು ಕಛೇರಿಗಳಿಗೆ ಬರುವ ಜನ ಸಾಮಾನ್ಯರ ಸಮಸ್ಯೆಗಳಿಗೆ ಪರಿಹರಿಸುವ ಕೆಲಸ ಮಾಡುವುದರ ಜತೆಗೆ ಸರ್ಕಾರ ಜನತೆಗಾಗಿ ತಂದಿರುವ ಯೋಜನೆಗಳು ಅರ್ಹ ಫಲಾನುಭವಿಗಳ ಮನೆಗೆ ತಲುಪಿಸಬೇಕೆಂದು ತಿಳಿಸಿದರು.

ಪೊಲೀಸ್ ಇಲಾಖೆಯವರು ಸಮಪರ್ಕವಾಗಿ ಕೆಲಸ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಶಾಸಕರು ಕಳ್ಳತನಗಳು ನಡೆದ ನಂತರ ಪ್ರಕರಣಗಳನ್ನು ದಾಖಲು ಮಾಡಿಕೊಂಡು ಪತ್ತೆ ಮಾಡುವ ಬದಲು ಕಳ್ಳತನ ನಡೆಯದಂತೆ ನೋಡಿಕೊಳ್ಳಲು ಬೇಕಾಗುವ ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ಸಲಹೆ ನೀಡಿದರು.
ಕೆ.ಆರ್.ನಗರದ ಸಿಎಂ ರಸ್ತೆ, ಬಜಾರ್‌ರಸ್ತೆ, ಮತ್ತು ೭ನೇ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು ಒಂದು ಬದಿ ಪಾರ್ಕಿಂಗ್ ವ್ಯವಸ್ಥೆ ಮಾಡುವಂತೆ ಕಳೆದ ಕೆಡಿಪಿ ಸಭೆಯಲ್ಲಿ ತಿಳಿಸಿದ್ದರೂ ಕೂಡ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಲ್ಲದೆ ಪೊಲೀಸ್ ಇಲಾಖೆಯವರು ದಿನದ ೨೪ ಗಂಟೆ ಕೆಲಸ ಮಾಡುವಲ್ಲಿ ನಿಕ್ಷಿçಯಗೊಂಡಿದ್ದಾರೆ ಎಂದರು.

ಕೃಷಿ ಇಲಾಖೆಯವರು ರೈತರಿಗೆ ಉಪಯುಕ್ತವಾದ ಭತ್ತದ ಬಿತ್ತನೆ ಬೀಜವನ್ನು ದಾಸ್ತಾನು ಮಾಡಿ ವಿತರಿಸಬೇಕು ಇದರ ಜತೆಗೆ ರೈತರ ಬೇಡಿಕೆಯಂತೆ ಬೇಕಾಗುವ ರಸಗೊಬ್ಬರಗಳನ್ನು ದಾಸ್ತಾನು ಮಾಡಿಕೊಳ್ಳುವಂತೆ ಅಂಗಡಿ ಮಾಲೀಕರುಗಳಿಗೆ ಸೂಚನೆ ನೀಡಬೇಕು ಎಂದು ಸಲಹೆ ನೀಡಿದ ಶಾಸಕರು ಕೃಷಿ ಇಲಾಖೆಯರ ಸಹಾಯಕ ನಿರ್ದೇಶಕರು ಗೊಬ್ಬರದ ಅಂಗಡಿಗಳ ಮಾಲೀಕರುಗಳ ಸಭೆ ಕರೆದು ಸರ್ಕಾರದ ನಿಯಮದಂತೆ ದರಪಟ್ಟಿ ಪ್ರದರ್ಶಿಸುವಂತೆ ಸೂಚಿಸಬೇಕು ಎಂದು ಹೇಳಿದರು.

ರೈತರ ಕೃಷಿ ಚಟುವಟಿಕೆಯ ಉಪಯೋಗಕ್ಕಾಗಿ ಸರ್ಕಾರದಿಂದ ಬರುವ ಸಲಕರಣೆಗಳನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡದೆ ಅರ್ಹ ಫಲಾನುಭವಿಗಳಿಗೆ ವಿತರಿಸಬೇಕು ಭತ್ತ ಸೇರಿದಂತೆ ಇತರ ಬೆಳೆಗಳಿಗೆ ರೋಗ ತಗುಲಿ ಬೆಳೆನಾಶವಾದಾಗ ಬಿತ್ತನೆ ಬೀಜವನ್ನು ಪರೀಕ್ಷೆಗೆ ಒಳಪಡಿಸಿ ಬೀಜ ಕಳಪೆಯೆಂದು ಕಂಡಿ ಬಂದರೆ ಆಯಾ ಕಂಪನಿಯ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡಬೇಕೆಂದು ತಾಕೀತು ಮಾಡಿದರು.

ವಸತಿ ಶಾಲೆಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡ ೧೦೦ರಷ್ಟು ಫಲಿತಾಂಶ ಪಡೆಯಬೇಕು ಈ ಬಾರಿ ಕಡಿಮೆ ಸಾಧನೆ ಮಾಡಿರುವುದರಿಂದ ನಾವು ಜಿಲ್ಲೆಯಲ್ಲಿ ೫ನೇ ಸ್ಥಾನಕ್ಕಿಳಿಯಲು ಕಾರಣವಾಯಿತು ಅದಕ್ಕಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಎಲ್ಲಾ ಮುಖ್ಯಶಿಕ್ಷಕರುಗಳ ಸಭೆ ನಡೆಸಿ ಈ ಬಾರಿ ಉತ್ತಮ ಫಲಿತಾಂಶ ಪಡೆಯಲು ಬೇಕಾಗುವ ಸಿದ್ದತೆಗಳನ್ನು ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

ಕನ್ನಡ ಶಾಲೆಗಳನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು ಅದಕ್ಕಾಗಿ ಮಕ್ಕಳೇ ಇಲ್ಲದೆ ಮುಚ್ಚಬೇಕಾಗಿರುವ ಮೂರು ಶಾಲೆಗಳಿಗೆ ಮಕ್ಕಳ ದಾಖಲಾತಿ ಮಾಡಿಸಲು ಶಿಕ್ಷಣ ಇಲಾಖೆಯವರು ಶ್ರಮಿಸಬೇಕೆಂದು ಹೇಳಿದ ಶಾಸಕ ಡಿ.ರವಿಶಂಕರ್ ನಾಲ್ಕು ಗ್ರಾಮಗಳಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ತೆರೆಯಲು ಸರ್ಕರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭ ಮಾಡಲು ಬಿಇಒ ಅವರು ಕ್ರಮ ವಹಿಸಬೇಕು ಎಂದು ನುಡಿದರು.

ಸೆಸ್ಕಂ ಇಲಾಖೆಯ ವತಿಯಿಂದ ರೈತರ ಪಂಪ್ ಸೆಟ್‌ಗಳಿಗೆ ಮತ್ತು ಗ್ರಾಮೀಣ ಭಾಗದ ಜನತೆಗೆ ಸಮಪರ್ಕವಾದ ವಿದ್ಯುತ್ ಸೌಲಭ್ಯ ಸರಬರಾಜು ಆಗುತ್ತಿಲ್ಲ ಎಂಬ ದೂರು ಕೇಳಿಬಂದಿದ್ದು ಈ ಸಮಸ್ಯೆ ಪರಿಹರಿಯಲು ಇಲಾಖೆಯ ಮುಖ್ಯಸ್ಥರು ನಾಳೆಯಿಂದಲೇ ಇಂಜಿನಿಯರ್‌ಗಳು ಮತ್ತು ಲೈನ್‌ಮ್ಯಾನ್‌ಗಳ ಸ್ಥಳ ಬದಲಾವಣೆ ಮಾಡಬೇಕು ಇದು ತಮ್ಮಿಂದ ಸಾಧ್ಯವಾಗದಿದ್ದರೆ ನನಗೆ ಪಟ್ಟಿ ನೀಡಬೇಕು ಎಂದು ಸೆಸ್ಕಂನ ಎರಡು ತಾಲೂಕುಗಳು ಎಇಇಗಳಿಗೆ ತಾಕೀತು ಮಾಡಿದರು.

ಮಿರ್ಲೆ ಉಪನೊಂದಣಾಧಿಕಾರಿ ಕಛೇರಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಕೆಲಸ ಮಾಡುತ್ತಿರುವುದು ಸರ್ಕಾರದ ನಿಯಮಕ್ಕೆ ವಿರುದ್ದವಾಗಿದೆ ಅದರನ್ನು ಕೂಡಲೇ ಕೆಲಸದಿಂದ ವಜಾ ಮಾಡಬೇಕು ಎಂದು ತಿಳಿಸಿದ್ದಲ್ಲದೆ ನೊಂದಣಿ ಅಧಿಕಾರಿಗಳು ದಾಖಲಾತಿಗಳನ್ನು ಸರಿಯಾಗಿ ಪರಿಶೀಲಿಸದೆ ನಕಲಿ ದಾಖಲಾತಿ ನೀಡಿರುವ ಆಸ್ತಿಗಳನ್ನು ನೊಂದಣಿ ಮಾಡಿರುವುದು ಕಂಡು ಬಂದಿದ್ದು ಈ ಬಗ್ಗೆ ಸಾಲಿಗ್ರಾಮ ತಾಲೂಕು ತಹಶೀಲ್ದಾರ್ ರವರು ಜಿಲ್ಲಾಧಿಕಾರಿಗಳಿಗೆ ವರದಿ ನೀಡಬೇಕು ಎಂದು ಸೂಚಿಸಿದರು.

ತಾಲೂಕು ಸಾರ್ವಜನಿಕ ಆಸ್ಪತ್ರೆ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಸಾಲಿಗ್ರಾಮ, ಮಿರ್ಲೆ ಆಸ್ಪತ್ರೆ ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉತ್ತಮವಾದ ಸೇವೆ ನೀಡಲು ಬೇಕಾಗುವ ಕ್ರಮಗಳನ್ನು ತಾಲೂಕು ಆರೋಗ್ಯಾಧಿಕಾರಿಗಳು ಮತ್ತು ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿಗಳು ತೆಗೆದುಕೊಳ್ಳಬೇಕು, ರೋಗಿಗಳಿಗೆ ಆಸ್ಪತ್ರೆಗಳಲ್ಲಿರುವ ಔಷಧಿ ಗಳನ್ನು ವಿತರಿಸಬೇಕು ಯಾವುದೇ ಕಾರಣಕ್ಕೂ ಖಾಸಗಿ ಮೆಡಿಕಲ್‌ಗಳಿಗೆ ಬರೆಯದಂತೆ ವೈದ್ಯರುಗಳಿಗೆ ಸೂಚನೆ ನೀಡಬೇಕು ಎಂದು ತಿಳಿಸಿದರು.

ಜಲ ಜೀವನ ಮಿಷನ್ ಯೋಜನೆಯಡಿ ನಮ್ಮ ಕ್ಷೇತ್ರದಲ್ಲಿ ನಡೆದಿರುವ ಕಾಮಗಾರಿ ಇನ್ನು ಪೂರ್ಣಗೊಂಡಿಲ್ಲಾ ಜತೆಗೆ ಈ ಯೋಜನೆಯಲ್ಲಿ ನಿರ್ಮಾಣವಾದ ನೀರಿನ ಟ್ಯಾಂಕ್‌ಗಳು ಕಳಪೆ ಕಾಮಗಾರಿಯಾಗಿದ್ದು ಇದರಲ್ಲಿ ಗುಣಮಟ್ಟ ಕಾಯ್ದುಕೊಳ್ಳದೇ ನಿರ್ಲಕ್ಷಿಸಲಾಗಿದ್ದು ಈ ಬಗ್ಗೆ ಸ್ಥಳ ಪರಿಶೀಲನೆ ಮಾಡಿ ನನಗೆ ವರದಿ ನೀಡುವಂತೆ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇರವರಿಗೆ ಹೇಳಿದ ಶಾಸಕ ಡಿ.ರವಿಶಂಕರ್ ಕುಡಿಯುವ ನೀರು ಸರಬರಾಜು ವಿಚಾರದಲ್ಲಿ ಯಾವುದೇ ರೀತಿಯ ರಾಜಿ ಬೇಡ ಎಂದು ಹೇಳಿದರು.

ಪುರಸಭೆಯವರು ನಗರದ ಜನತೆಗೆ ಶುದ್ದ ಕುಡಿಯುವ ನೀರನ್ನು ಸಮಪರ್ಕವಾಗಿ ಸರಬರಾಜು ಮಾಡಬೇಕು ಇದರ ಜತೆಗೆ ಸ್ವಚ್ಚತೆಗೆ ಮೊದಲ ಆದ್ಯತೆ ನೀಡಬೇಕೆಂದು ಹೇಳಿದ ಶಾಸಕರು ಒಳಚರಂಡಿ ಕಾಮಗಾರಿ ಸೇರಿದಂತೆ ಇತರ ಅಭಿವೃದ್ದಿ ಕಾಮಗಾರಿಗಾಗಿ ಸಾಕಷ್ಟು ಹಣ ಬಿಡುಗಡೆಯಾಗಿದ್ದು ಎಲ್ಲಾ ಕಾಮಗಾರಿಗಳನ್ನು ಆರಂಭಿಸಬೇಕೆoದು ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಲಕ್ಷಿö್ಮಕಾಂತರೆಡ್ಡಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಯುತೇಶ್‌ಕುಮಾರ್, ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕ ದೊಡ್ಡಸ್ವಾಮೇಗೌಡ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷೆ ಪುಷ್ಪಲತಾರಮೇಶ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್, ತಹಸಿಲ್ಧಾರ್‌ಗಳಾದ ಜಿ.ಸುರೇಂದ್ರಮೂರ್ತಿ, ಎಸ್.ನರಗುಂದ, ತಾಪಂ ಇಒಗಳಾದ ವಿ.ಪಿ.ಕುಲದೀಪ್, ರವಿ, ತಾ.ಪಂ.ಮ್ಯಾನೇಜರ್ ಸತೀಶ್ ಕರ್ತಾಳ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular