ಬೀದರ್ : ವಸತಿ ಶಾಲೆಯಲ್ಲೇ 10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೀದರ್ನಲ್ಲಿ ನಡೆದಿದ್ದು, ವಿದ್ಯಾರ್ಥಿ ಶರತ್(16) ಮೃತ ದುರ್ದೈವಿಯಾಗಿದ್ದು, ಈತ ಬಸವ ಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದ ನವೋದಯ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಮಂಠಾಳ ಗ್ರಾಮದ ಶರತ್, ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದ ನವೋದಯ ವಸತಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡ್ತಿದ್ದ. ನಿನ್ನೆ(ಫೆ.10) ರಾತ್ರಿ ಡೆತ್ ನೋಟ್ ಬರೆದಿಟ್ಟು ಶರತ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಹಾಸ್ಟೆಲ್‌ನಲ್ಲೇ ರಾತ್ರಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ವಿದ್ಯಾರ್ಥಿ ಶವ ಪತ್ತೆಯಾಗಿದ್ದು, ಮಗನ ಸಾವಿನ ಸುದ್ದಿ ಕೇಳಿ ಪೋಷಕರು ಆಘಾತಗೊಂಡಿದ್ದಾರೆ. ಹಾಸ್ಟೆಲ್ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇನ್ನೂ ಶರತ್ ನೇಣಿಗೆ ಶರಣಾದ ಜಾಗದಲ್ಲಿ ಡೆತ್ ನೋಟ್ ಕೂಡ ಸಿಕ್ಕಿದ್ದು, ‘SORRY ಮಮ್ಮಿ, ಪಾಪ i love you’ ಎಂದು ಬರೆದಿರುವ ಶರತ್ ‘Keep Smile Forever’ ಎಂದು ಉಲ್ಲೇಖಿಸಿದ್ದಾನೆ. ಮಗನ ಡೆತ್ ನೋಟ್ ಕಂಡು ತಂದೆ-ತಾಯಿ ಕಣ್ಣೀರು ಹಾಕಿದ್ದಾರೆ.
ಸ್ಥಳಕ್ಕೆ ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಪಿಎಸ್ಐ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಎಸ್ಎಸ್ಎಲ್ಸಿ ಪರೀಕ್ಷೆಗೆ ಕೆಲವೇ ದಿನಗಳಿರುವ ಸಮಯದಲ್ಲೇ ವಿದ್ಯಾರ್ಥಿ ಸಾವನ್ನಪ್ಪಿದ್ದು, ನಾನಾ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಆದರೆ ವಿದ್ಯಾರ್ಥಿ ಶರತ್ ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.



