ಹನೂರು: ಪಟ್ಟಣದ ಕ್ರಿಸ್ತರಾಜ ಶಿಕ್ಷಣ ಸಂಸ್ಥೆಯಲ್ಲಿ ನೂತನವಾಗಿ ದ್ವಿತೀಯ ಪಿಯುಸಿಗೆ ಕಂಪ್ಯೂಟರ್ ಸೈನ್ಸ್ ಕೋರ್ಸ್ ಆರಂಭಿಸಿರುವುದು ಈ ಭಾಗದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಮಾಜಿ ಶಾಸಕ ಆರ್ ನರೇಂದ್ರ ತಿಳಿಸಿದರು.
ಪಟ್ಟಣದ ಕ್ರಿಸ್ತ ರಾಜ ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ದ್ವಿತೀಯ ಪಿಯುಸಿಯ ನೂತನ ಕೋರ್ಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಳೆದ 43 ವರ್ಷಗಳಿಂದ ಕ್ರಿಸ್ತ ರಾಜ ವಿದ್ಯಾ ಸಂಸ್ಥೆ ಹನೂರು ಭಾಗದ ವಿದ್ಯಾರ್ಥಿಗಳಿಗೆ ವಿದ್ಯಾ ದೇಗುಲವಾಗಿದೆ. ಈ ಶಾಲೆಯಲ್ಲಿ ಓದಿರುವ ಸಾವಿರಾರು ವಿದ್ಯಾರ್ಥಿಗಳು ಸರ್ಕಾರಿ ಉದ್ಯೋಗ ಪಡೆದಿರುವುದು ಸಂತಸದ ವಿಚಾರವಾಗಿದೆ. ಈ ಶಾಲೆಯಲ್ಲಿ ವಿದ್ಯಾರ್ಥಿಗಳು ಶಿಸ್ತು ಪಾಲನೆ ಮಾಡುವುದರಲ್ಲಿ ಮೊದಲಿಗರಾಗಿದ್ದಾರೆ. ವಿದ್ಯಾರ್ಥಿಗಳು ಶಿಸ್ತು ಪಾಲನೆ ಮಾಡಿದರೆ ಮಾತ್ರ ಅವರು ಜೀವನದಲ್ಲಿ ಮುಂದೆ ಬರಲು ಸಾಧ್ಯ, ತಂದೆ ತಾಯಿಗಳು ತಮ್ಮ ಮಕ್ಕಳು ಚೆನ್ನಾಗಿ ಕಲಿಯಲಿ ಎಂದು ಶಾಲೆಗಳಿಗೆ ಸೇರಿಸುತ್ತಾರೆ. ವಿದ್ಯಾರ್ಥಿಗಳು ಸಹ ತಂದೆ ತಾಯಿಗಳ ಪರಿಶ್ರಮಕ್ಕೆ ತಕ್ಕಂತೆ ವಿದ್ಯಾಭ್ಯಾಸ ಮಾಡಬೇಕು ಶ್ರದ್ಧೆಯಿಂದ ಕಲಿತರೆ ಮಾತ್ರ ನಾವು ಏನನ್ನಾದರೂ ಸಾಧಿಸಲು ಸಾಧ್ಯ ಪ್ರತಿಯೊಬ್ಬ ವಿದ್ಯಾರ್ಥಿಗೂ ಗುರಿ ಇರಬೇಕು, ಗುರಿ ಮುಟ್ಟಲು ಶಿಕ್ಷಕರು ಮಾಡುವ ಪಾಠಗಳನ್ನು ಶ್ರದ್ದೆಯಿಂದ ಕೇಳಿ ಪರೀಕ್ಷೆಯಲ್ಲಿ ಉತ್ತಮವಾಗಿ ಬರೆದರೆ ತಮ್ಮ ಗುರಿಗಳನ್ನು ಮುಟ್ಟಬಹುದು. ಪ್ರತಿಯೊಬ್ಬ ವಿದ್ಯಾರ್ಥಿಯು ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಬೇಕು. ಹಾಗಿದ್ದರೆ ಮಾತ್ರ ಉನ್ನತ ಶಿಕ್ಷಣಕ್ಕೆ ಅನುಕೂಲವಾಗಲಿದೆ ಇಲ್ಲದಿದ್ದರೆ ಇಂಜಿನಿಯರ್ ಮೆಡಿಕಲ್ ಸೀಟು ಪಡೆಯಲು ಲಕ್ಷಾಂತರ ಹಣ ಖರ್ಚು ಮಾಡಿ ಖಾಸಗಿ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆಯಬೇಕಾಗುತ್ತದೆ ಆದ್ದರಿಂದ ಈ ಎರಡು ಹಂತಗಳಲ್ಲಿ ವಿದ್ಯಾರ್ಥಿಗಳು ಎಚ್ಚರ ವಹಿಸಬೇಕು ಎಂದರು.
ಡಿ ಡಿ ಪಿ ಯು ಮಂಜುನಾಥ್ ಪ್ರಸನ್ನ ಮಾತನಾಡಿ ಹನೂರು ಪಟ್ಟಣದ ಕ್ರಿಸ್ತರಾಜ ಪದವಿಪೂರ್ವ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಹಾಗೂ ಸಂಖ್ಯಾಶಾಸ್ತ್ರ ಪ್ರಾರಂಭ ಮಾಡಿರುವುದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಆದ್ದರಿಂದ ವಿದ್ಯಾರ್ಥಿಗಳು ಈ ಕೋರ್ಸ್ ಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಕ್ರಿಸ್ತ ರಾಜ ವಿದ್ಯಾಸಂಸ್ಥೆಯ ಸಂಚಾಲಕರಾದ ಫಾದರ್ ರೋಷನ್ ಎಸ್ , ಜಿಲ್ಲಾ ಪ್ರಾಂಶುಪಾಲ ಸಂಘದ ಅಧ್ಯಕ್ಷರಾದ ಪ್ರಮೋದ್, ಜಿ ವಿ ಗೌಡ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ಸ್ವಾಮಿ, ಮುಖ್ಯ ಶಿಕ್ಷಕರುಗಳಾದ ರಾಬರ್ಟ್ ಕ್ಲೈಮಂಟ್ ಧನ್ ರಾಜ್, ಸಿಸ್ಟರ್ ಶಾಂತಿ ಡಿಸೋಜ, ಸಿಸ್ಟರ್ ಜೆಸಿಂತಾ ಗಲ್ಬಾವೋ,ಉಪನ್ಯಾಸಕರಾದ ವಿನೋದ್, ಪವಿತ್ರ ಸೇರಿದಂತೆ ಸಹ ಶಿಕ್ಷಕರುಗಳು ವಿದ್ಯಾರ್ಥಿಗಳು ಹಾಜರಿದ್ದರು.