ಮೈಸೂರು : ಕಾನೂನು ಅಧ್ಯಯನ ಕೇವಲ ಒಂದು ವೃತ್ತಿ ಅಲ್ಲ. ಅದು ಒಂದು ಸಾಮಾಜಿಕ ಜವಾಬ್ದಾರಿಯಾಗಿದೆ ಎಂದು ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಪ್ರೊ.ಎಸ್.ಪಿ.ಮಂಜುನಾಥ ಅಭಿಪ್ರಾಯಪಟ್ಟರು.
ನಗರದ ಕುವೆಂಪುನಗರದಲ್ಲಿರುವ ಜೆಎಸ್‍ಎಸ್ ಕಾನೂನು ಕಾಲೇಜಿನಲ್ಲಿ ನಡೆದ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿರುವವರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದ ಅವರು, ಕಾನೂನನ್ನು ಅಭ್ಯಾಸ ಮಾಡುವವರು ಈ ಕ್ಷೇತ್ರವನ್ನು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಮತ್ತು ರಕ್ಷಿಸುವ ಸಾಧನವಾಗಿ ಬಳಸಿಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಹೊಸದಾಗಿ ನ್ಯಾಯಾಧೀಶರಾಗಿ ನೇಮಕಗೊಂಡಿರುವವರು ನಿಮ್ಮ ನಿಮ್ಮ ಪ್ರಾಮಾಣಿಕತೆ, ನಿಮ್ಮ ಪರಿಶ್ರಮ ಮತ್ತು ನಿಷ್ಠೆಯಿಂದ ಸಮಾಜಕ್ಕೆ ಉತ್ತಮ ಸೇವೆ ದೊರಕಲಿ ಎಂದು ಆಶಯ ವ್ಯಕ್ತಪಡಿಸಿದ್ದರು.
ಜೆಎಸ್‍ಎಸ್ ಕಾನೂನು ಕಾಲೇಜು ಕೇವಲ ಕಾನೂನು ಪದವೀಧರರನ್ನು ಉತ್ಪಾದನೆ ಮಾಡದೆ, ಸಾಮಾಜಿಕ ನ್ಯಾಯ, ಸಮಾನತೆ, ಸಂವಿಧಾನ ಆಶಯ ಮತ್ತು ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿದೆ. ಇಲ್ಲಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳನ್ಬು ನಿಷ್ಠಾವಂತ ನ್ಯಾಯಾಧೀಶರನ್ನಾಗಿ, ವಕೀಲರುಗಳಾಗಿ ಹಾಗೂ ಕಾನೂನು ತಜ್ಞರನ್ನು ಸಮಾಜಕ್ಕೆ ನೀಡುವಲ್ಲಿ ತನ್ನದೇ ಆದ ಪಾತ್ರ ವಹಿಸುತ್ತಿದೆ ಎಂದರು.
ಪ್ರಜಾಪ್ರಭುತ್ವದಲ್ಲಿ ಅತ್ಯಂತ ದೊಡ್ಡ ರಾಷ್ಟ್ರವಾಗಿರುವ ನಮ್ಮ ಭಾರತ ದೇಶದಲ್ಲಿ ನ್ಯಾಯಾಂಗವನ್ನು ಉನ್ನತ ಸ್ಥಾನದಲ್ಲಿ ಇಟ್ಟಿದ್ದೇವೆ. ಅದರ ಮೇಲೆ ಪೂರ್ಣ ನಂಬಿಕೆ ಹೊಂದಿದ್ದೇವೆ. ನ್ಯಾಯಾಧೀಶರು ನೀಡುವ ತೀರ್ಪುಗಳು ಸಮಾಜದಲ್ಲಿ ಶಾಂತಿ ಮತ್ತು ನ್ಯಾಯದ ಸ್ಥಾಪನೆಗೆ ದಾರಿ ಮಾಡಿಕೊಡುತ್ತವೆ. ಆದ್ದರಿಂದ ನೂತನವಾಗಿ ನೇಮಕಗೊಂಡಿರುವವರು ಅದೇ ಹಾದಿಯಲ್ಲಿ ಸಾಗಿ, ಜನರ ನಂಬಿಕೆಯನ್ನು ಉಳಿಸಿಕೊಳ್ಳಬೇಕು ಎಂದರು.
ಸಾಧನೆಗೆ ಕಠಿಣ ಪರಿಶ್ರಮ, ಹಿಡಿದ ಕೆಲಸದಲ್ಲಿ ಶ್ರದ್ಧೆ, ಏಕಾಗ್ರತೆ, ತನ್ಮಯತೆ ಬಹಳ ಮುಖ್ಯ. ಬೇರೆಯವರನ್ನು ನೋಡಿ ಅವರಂತೆ ನಾವೂ ಕೂಡಾ ಆಗಬೇಕು ಎಂದುಕೊಂಡರೆ ಸಾಧನೆ ಸಾಧ್ಯವಾಗುವುದಿಲ್ಲ. ಗುರಿ ಮುಟ್ಟಲು ಯೋಜನೆ ಹಾಕಿಕೊಳ್ಳಬೇಕು. ಗುರುವಿನ ಮಾರ್ಗದರ್ಶನ ಪಡೆದುಕೊಳ್ಳಬೇಕು. ಆಗ ಮಾತ್ರ ಯಶಸ್ಸಿನ ಮೆಟ್ಟಿಲುಗಳನ್ನು ಹತ್ತಲು ಸಾಧ್ಯವಾಗುತ್ತದೆ ಎಂದರು.
ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಕಾರ್ಯನಿರ್ವಾಹಕ ಪ್ರೊ.ಕೆ.ಎಸ್.ಸುರೇಶ್, ಪ್ರಾಂಶುಪಾಲೆ ಡಾ.ಎನ್.ವಾಣಿಶ್ರೀ, ಹಿರಿಯ ವಕೀಲ ಹೆಚ್.ಎನ್.ವೆಂಕಟೇಶ ಮತ್ತಿತರರು ಹಾಜರಿದ್ದರು.
ನ್ಯಾಯಾಧೀಶರಿಗೆ ಸನ್ಮಾನ : ಜೆಎಸ್‍ಎಸ್ ಕಾನೂನು ಕಾಲೇಜಿನಲ್ಲಿ ಓದಿ ಪ್ರಸ್ತುತ ಸಿವಿಲ್ ನ್ಯಾಯಾಧೀಶರಾಗಿ ನೇಮಕಗೊಂಡಿರುವ ಕೆ.ಬಿ.ರೋಶನಿ, ರಾಹುಲ್ ಆದಿನಾಥ ನ್ಯಾಮಗೌಡ, ಮಹದೇವ ಕೆ.ಗೌಡ, ಕೆ.ಸಿ.ಸುಹಾಸ್, ರಶ್ಮಿ ವೀರಭದ್ರ, ಸುಪ್ರಿಯಾ ನವಲಿ, ನಿತ್ಯಾ ಎನ್.ಗುಜ್ಜಾರ್ ಅವರನ್ನು ಸನ್ಮಾನಿಸಲಾಯಿತು.



